ಮೊಳಕೆ ಬರಿಸಿದ ಕಾಳುಗಳಿಂದ ಮತ್ತು ಧಾನ್ಯಗಳಿಂದ ಆರೋಗ್ಯ ವರ್ಧನೆ!!!
ಸೋಮವಾರ, 3 ಸೆಪ್ಟಂಬರ್ 2018 (18:40 IST)
ಉತ್ತಮವಾದ ಆರೋಗ್ಯಕರವಾದ ಜೀವನವನ್ನು ನಡೆಸುವುದು ಈಗಿನ ವಿದ್ಯಮಾನದಲ್ಲಿ ಕಷ್ಟಕರವಾಗಿದೆ. ಎಲ್ಲೆಲ್ಲಿಯೂ ಕಲಬೆರಕೆಯ ಆಹಾರ ಪದಾರ್ಥಗಳನ್ನು ತಿನ್ನುತ್ತಿರುವುದರಿಂದ ಯಾವ ತುತ್ತಿನಲ್ಲಿಯೂ ಪೌಷ್ಠಿಕಾಂಶವನ್ನು ಹುಡುಕುವುದು ಅಸಾಧ್ಯವಾದ ಮಾತು. ಆದರೆ ನಾವು ಧಾನ್ಯಗಳನ್ನು ಆಹಾರ ಪದಾರ್ಥದಲ್ಲಿ ಬಳಸಿದಂತೆ ಧಾನ್ಯಗಳನ್ನು ನೆನೆಸಿ ಅದನ್ನು ಮೊಳಕೆ ತರಿಸಿ ಸೇವಿಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಹಲವಾರು ಸಂಶೋಧನೆಗಳು ಮೊಳಕೆ ತರಿಸಿದ ಆಹಾರ ಪದಾರ್ಥಗಳಿಂದ ಹೆಚ್ಚಿನ ಪೌಷ್ಟಿಕಾಂಶಗಳು ದೊರೆಯುತ್ತದೆ ಎಂದು ಸಾಬೀತುಪಡಿಸಿವೆ.
* ಮೊಳಕೆ ತರಿಸುವುದು ಹೇಗೆ?
ಮೊದಲಿಗೆ ಧಾನ್ಯ ಅಥವಾ ಕಾಳನ್ನು ಒಂದು ಪಾತ್ರೆಯಲ್ಲಿ ಹಾಕಿ ಅದನ್ನು ಚೆನ್ನಾಗಿ ತೊಳೆದು ತಣ್ಣೀರನ್ನು ಹಾಕಬೇಕು. ನೀರಿನ ಮಟ್ಟವು ಕಾಳುಗಳ ಅಥವಾ ಧಾನ್ಯಗಳ ಮಟ್ಟಕ್ಕಿಂತ ಕೊಂಚ ಜಾಸ್ತಿಯೇ ಇರಬೇಕು. ಆದರೆ ಬಹಳ ಜಾಸ್ತಿ ಆದರೆ ಕಾಳುಗಳು ಮೊಳಕೆಯೊಡೆಯುವುದಿಲ್ಲ. ನೀರಿನಲ್ಲಿ ತೆಲುವ ಕಾಳುಗಳು ನಿಷ್ಪ್ರಯೋಜಕ ಕಾಳುಗಳಾಗಿದ್ದು, ಅವುಗಳನ್ನು ತೆಗೆದು ಹಾಕುವುದು ಉತ್ತಮ. ನಂತರ ಬಟ್ಟೆ ಕಟ್ಟಿ ಬಟ್ಟೆಯಿಂದ ನೀರನ್ನು ಹೊರಕ್ಕೆ ಚೆಲ್ಲಿ. ನಂತರ ಮತ್ತೆ ಕಾಳು ಮುಳುಗುವಷ್ಟು ನೀರು ಹಾಕಿ ಮೊದಲಿನಂತೆಯೇ ಬಟ್ಟೆ ಕಟ್ಟಿ ತಣ್ಣನೆಯ ಸ್ಥಳದಲ್ಲಿಡಬೇಕು. ದಿನಕ್ಕೆರಡು ಬಾರಿ ಹೀಗೆ ನೀರನ್ನು ಬದಲಿಸಬೇಕು. ಆಗ ಒಂದರಿಂದ ಎರಡು ದಿನಗಳಲ್ಲಿಯೇ ಧಾನ್ಯಗಳು ಮೊಳಕೆ ಒಡೆದಿರುತ್ತದೆ.
** ಯಾವ ಯಾವ ಧಾನ್ಯಗಳನ್ನು ಮೊಳಕೆ ತರಿಸಬಹುದು?
ಎಲ್ಲಾ ಧಾನ್ಯಗಳನ್ನು ನೀರಿನಲ್ಲಿ ಅಥವಾ ಮೊಸರಿನಲ್ಲಿ ನೆನೆಸಿ ಮೊಳಕೆ ತರಿಸಲು ಸಾಧ್ಯವಿಲ್ಲ. ಮೊಳಕೆ ತರಿಸಿ ಸೇವಿಸಲು ಉತ್ತಮವಾದ ಧಾನ್ಯಗಳೆಂದರೆ ಹುರುಳಿ, ಹೆಸರುಕಾಳು, ಬೀನ್ಸ್, ಅವರೆ ಧಾನ್ಯ, ಕಡ್ಲೆ ಕಾಳು, ಸೋಯಾ, ರಾಗಿ, ಕ್ವಿನೋವಾ, ಕಪ್ಪು ಬೀನ್ಸ್, ಶೇಂಗಾ, ಹೆಸರುಕಾಳು ಉತ್ತಮವಾದದ್ದಾಗಿದೆ.
ಸಾಮಾನ್ಯವಾಗಿ ಒಣಧಾನ್ಯ, ಕಾಳುಗಳೆಲ್ಲ ಬೇಯುವುದಕ್ಕೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ ಇವನ್ನು ನೀರು ಅಥವಾ ಮೊಸರಿನಲ್ಲಿ 24 ಗಂಟೆಗಳ ಕಾಲ ನೆನೆಸಿಟ್ಟರೆ ಕಾಳುಗಳು ಸುಲಭವಾಗಿ ಬೇಯುತ್ತದೆ.
ಇಂತಹ ನೆನೆಸಿಟ್ಟ ಅಥವಾ ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಾದರೆ ಈ ಕಾಳುಗಳಿಂದ ಆರೋಗ್ಯದ ಪ್ರಯೋಜನಗಳನ್ನು ಒಂದೊಂದಾಗಿ ನೋಡೋಣ......
- ಜೀರ್ಣಕ್ರಿಯೆಗೆ ಸಹಕಾರಿ : ಮೊಳಕೆ ಒಡೆದ ಧಾನ್ಯಗಳು ಮತ್ತು ರಾತ್ರಿ ನೆನೆಸಿಟ್ಟ ಕಾಳುಗಳು ಸುಲಭವಾಗಿ ಬೇಯುವುದರೊಂದಿಗೆ ಸುಲಭವಾಗಿ ಜೀರ್ಣವಾಗುತ್ತವೆ. ಈ ಧಾನ್ಯಗಳನ್ನು ನೆನೆಸಿಟ್ಟು ಬೇಯಿಸಿ ಸೇವಿಸುವ ಮೂಲಕ ಕಿಣ್ವ ಪ್ರತಿರೋಧಕಗಳ ಚಟುವಟಿಕೆಯನ್ನು ನಿಯಂತ್ರಿಸಿದಂತಾಗುತ್ತದೆ.
- ಫೈಟಿಕ್ ಆಮ್ಲ ಕಡಿಮೆಯಾಗುತ್ತದೆ : ಧಾನ್ಯಗಳ ಹೊರಕವಚದಲ್ಲಿರುವ ಈ ಆಮ್ಲವು ಧಾನ್ಯಗಳಲ್ಲಿರುವ ಕ್ಯಾಲ್ಸಿಯಂ, ಮೆಗ್ನೆಶಿಯಂಗಳನ್ನು ದೇಹ ಹೀರಿಕೊಳ್ಳುವುದನ್ನು ತಡೆಯುತ್ತದೆ. ಆದರೆ ಧಾನ್ಯಗಳು ಮೊಳಕೆಯೊಡೆದಾಗ ಈ ಫೈಟಿಕ್ ಆಮ್ಲವು ವಿಭಜನೆಗೊಳ್ಳುವುದಕ್ಕೆ ನೆರವಾಗುತ್ತದೆ.
- ರಕ್ತ ಪರಿಚಲನೆಯ ಸರಾಗವಾದ ಚಲನೆಗೆ ನೆರವಾಗುತ್ತದೆ : ಕಾಳುಗಳಲ್ಲಿ ಮತ್ತು ಧಾನ್ಯಗಳಲ್ಲಿ ಹೇರಳವಾಗಿರುವ ಕಬ್ಬಿಣ ಮತ್ತು ತಾಮ್ರಗಳು ರಕ್ತದಲ್ಲಿರುವ ಕೆಂಪು ರಕ್ತಕಣಗಳ ಸಂಖ್ಯೆಯ ಹೆಚ್ಚಳಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ.
- ಕೂದಲ ಬೆಳವಣಿಗೆಯಲ್ಲಿ ಸಹಕಾರಿ : ಮೊಳಕೆಯೊಡೆದ ಕಾಳುಗಳ ಮತ್ತು ಧಾನ್ಯಗಳ ಸೇವನೆಯಿಂದ ಹೊಸ ನರಗಳು ಬೇಗನೆ ಬೆಳವಣಿಗೆಯನ್ನು ಪಡೆಯುತ್ತವೆ ಮತ್ತು ಕೂದಲಿನ ಬೆಳವಣಿಗೆಯಲ್ಲಿಯೂ ಇವುಗಳು ಸಹಕರಿಸುತ್ತವೆ. ಅಷ್ಟೇ ಅಲ್ಲದೇ ಇವು ಹೆಚ್ಚು ಹೆಚ್ಚು ಆಮ್ಲಜನಕವನ್ನು ರಕ್ತದ ಮೂಲಕ ದೇಹದ ವಿವಿಧ ಅಂಗಗಳಿಗೆ ಮತ್ತು ಜೀವಕೋಶಗಳಿಗೆ ತಲುಪಿಸಲು ನೆರವಾಗುತ್ತದೆ.
- ಕಣ್ಣಿನ ದೃಷ್ಟಿಗೆ ಬಹಳ ಒಳ್ಳೆಯದು : ಮೊಳಕೆಯೊಡೆದ ಧಾನ್ಯಗಳಲ್ಲಿ ವಿಟಾಮಿನ್ ಎ ಸಮೃದ್ಧವಾಗಿರುತ್ತದೆ ಇದು ಕಣ್ಣಿನ ಅರೋಗ್ಯಕ್ಕೆ, ದೃಷ್ಟಿ ಸುಧಾರಿಸಲು ನೆರವಾಗುತ್ತದೆ. ಅಲ್ಲದೇ ಈ ಮೊಳಕೆಯೊಡೆದ ಧಾನ್ಯಗಳ ಸೇವನೆಯಿಂದ ಕಣ್ಣುಗಳ ಜೀವಕೋಶಗಳಿಗೆ ಫ್ರೀ ರಾಡಿಕಲ್ ಎಂಬ ಕಣಗಳಿಂದ ಎದುರಾಗುವ ಅಪಾಯವನ್ನೂ ಸಹ ತಪ್ಪಿಸಬಹುದಾಗಿದೆ.
- ಹೃದಯದ ಆರೋಗ್ಯಕ್ಕೆ ಬಹಳ ಉತ್ತಮವಾದ ಆಹಾರವಾಗಿದೆ : ಮೊಳಕೆಯೊಡೆದ ಧಾನ್ಯಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳಿದ್ದು ಇವು ರಕ್ತದಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕೊಬ್ಬಿನ ಆಮ್ಲಗಳು ನಿರೋಧಕ ಗುಣವನ್ನು ಪಡೆದಿದ್ದು ಹೃದಯಕ್ಕೆ ಹೆಚ್ಚುವರಿ ಒತ್ತಡ ಬೀಳದಂತೆ ತಡೆಯುವುದಲ್ಲದೇ ಹೃದಯದ ಆರೋಗ್ಯವನ್ನು ಉತ್ತಮವಾಗಿ ಇರಿಸುತ್ತದೆ.
- ವಿಟಾಮಿನ್‌ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ : ಕಾಳುಗಳನ್ನು ಅಥವಾ ಧಾನ್ಯಗಳನ್ನು ನೀರಿನಲ್ಲಿ ನೆನೆಸಿಡುವುದರಿಂದ ಧಾನ್ಯದಲ್ಲಿರುವ ವಿಟಾಮಿನ್‌ಗಳು ನೀರಿನಲ್ಲಿ ಸಂಗ್ರಹವಾಗುತ್ತದೆ. ಈ ಧಾನ್ಯಗಳೊಂದಿಗೆ ಅಧವಾ ಕಾಳುಗಳೊಂದಿಗೆ ನೆನೆಸಿಟ್ಟ ನೀರನ್ನೇ ಬಳಸುವುದರಿಂದ ಆಹಾರ ಪದಾರ್ಥದಲ್ಲಿ ವಿಟಾಮಿನ್‌ಗಳ ಪ್ರಮಾಣವು ಹೆಚ್ಚಳವಾಗುತ್ತದೆ.
- ತೂಕ ಇಳಿಕೆಗೆ ಅತ್ಯಂತ ಸಹಕಾರಿಯಾಗಿದೆ : ಮೊಳಕೆ ಬಂದ ಕಾಳುಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುವುದಲ್ಲದೇ ಇವು ಕ್ಯಾಲೋರಿರಹಿತವಾಗಿರುತ್ತದೆ. ಈ ಧಾನ್ಯಗಳ ಸೇವನೆಯಿಂದ ತೂಕದಲ್ಲಿ ಇಳಿಕೆ ಕಂಡುಬರುತ್ತದೆ. ಅದಲ್ಲದೇ ಈ ಮೊಳಕೆಯೊಡೆದ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ನಾರು ಇರುವುದರಿಂದ ಇದು ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.
- ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ : ಮೆಳಕೆಯೊಡೆದ ಧಾನ್ಯಗಳಲ್ಲಿ ಅಧಿಕ ಪ್ರಮಾಣದ ವಿಟಾಮಿನ್ ಸಿ ಇರುವುದರಿಂದ ಇವು ದೇಹದಲ್ಲಿ ಬಿಳಿ ರಕ್ತಕಣಗಳನ್ನು ಪ್ರಚೋದಿಸುತ್ತವೆ. ಅಲ್ಲದೇ ಮೊಳಕೆಯೊಡೆದ ಧಾನ್ಯಗಳಲ್ಲಿರುವ ವಿಟಾಮಿನ್ ಎ ಸಹ ಉತ್ತಮ ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿದ್ದು ಇವು ದೇಹದಲ್ಲಿ ಇನ್ನಷ್ಟು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
- ಚಿರಯೌವ್ವನವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ : ಮೊಳಕೆಯೊಡೆದ ಧಾನ್ಯಗಳನ್ನು ನಾವು ದೈನಂದಿನ ಆಹಾರ ಪದಾರ್ಥಗಳಲ್ಲಿ ಬಳಸುವುದರಿಂದ ದೇಹವು ಉಲ್ಲಾಸದಿಂದ ಇರುವುದಲ್ಲದೇ ಚಿರಯೌವ್ವನವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಮೊಳಕೆಯೊಡೆದ ಕಾಳುಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ವಿಫಲವಾಗಿದ್ದು ಇವು ಅವಧಿಗೂ ಮುನ್ನ ವೃದ್ಧಾಪ್ಯ ಆವರಿಸುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲದೇ ಫ್ರೀ ರಾಡಿಕಲ್ ಎಂಬ ಕ್ಯಾನ್ಸರ್‌ಕಾರಕ ಕಣಗಳು ಜೀವಕೋಶಗಳಿಗೆ ಹಾನಿ ಎಸಗುವುದರಿಂದಲೂ ತಡೆಗೊಡ್ಡಿ ವೃದ್ಧಾಪ್ಯವನ್ನು ದೂರವಿರಿಸುತ್ತದೆ.
- ದೇಹದಲ್ಲಿನ ಪಿ. ಎಚ್. ಮಟ್ಟವನ್ನು ಸುಧಾರಿಸುತ್ತದೆ : ಮೊಳಕೆಯೊಡೆದ ಧಾನ್ಯಗಳ ಸೇವನೆಯಿಂದ ದೇಹದಲ್ಲಿ ಆಮ್ಲೀಯತೆ ಕಡಿಮೆಯಾಗುತ್ತದೆ. ಧಾನ್ಯಗಳನ್ನು ನೆನೆಸಿ ಸೇವಿಸುವುದರಿಂದ ಈ ಧಾನ್ಯಗಳಲ್ಲಿರುವ ಕ್ಷಾರೀಯ ಗುಣಗಳು ಕಡಿಮೆಯಾಗಿ ತಟಸ್ಠಗೊಳಿಸುತ್ತದೆ.
ಈಗಿನ ವಿದ್ಯಮಾನದಲ್ಲಿ ಕಲುಷಿತವಲ್ಲದ, ತಾಜಾ ತರಕಾರಿಗಳು, ಹಣ್ಣುಗಳು ಸಿಗುವುದು ಕಷ್ಟಕರವಾದ ಸಂಗತಿಯಾಗಿದೆ. ತಿನ್ನುವ ಆಹಾರ ಪದಾರ್ಥಗಳನ್ನು ರಾಸಾಯನಿಕಗಳನ್ನು ಸಿಂಪಡಿಸಿ ಬೆಳೆಯುವ ಪರಿಸ್ಥಿತಿಯು ನಿರ್ಮಾಣವಾಗಿದೆ. ಆದ್ದರಿಂದ ಇಂತಹ ವಾತಾವರಣದಲ್ಲಿ ಪೌಷ್ಠಿಕಾಂಶದ ಕೊರತೆಯಿಂದಾಗಿ ಆರೋಗ್ಯದಲ್ಲಿನ ಏರು ಪೇರುಗಳನ್ನು ನಾವು ಕಾಣಬಹುದು. ಅಂತಹ ಸಂದರ್ಭದಲ್ಲಿ ಮೊಳಕೆಯೊಡೆದ ಧಾನ್ಯಗಳನ್ನು ಅಥವಾ ಕಾಳುಗಳನ್ನು ಹಸಿಯಾಗಿಯೇ ಸೇವಿಸುವುದರಿಂದ ಸ್ವಲ್ಪ ಮಟ್ಟಿಗೆ ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸಿಕೊಳ್ಳಬಹುದು.