ಅತಿ ಹೆಚ್ಚು ಮೊಬೈಲ್ ಫೋನ್ ಬಳಕೆ ತರಲಿದೆ ಕಿವುಡುತನ

ಸೋಮವಾರ, 26 ಸೆಪ್ಟಂಬರ್ 2016 (17:46 IST)
ನಿರಂತರ ಮೊಬೈಲ್ ಬಳಕೆದಾರರೇ ಎಚ್ಚರಿಕೆ!. ನೀವು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಮೊಬೈಲ್ ಬಳಸುತ್ತಿದ್ದೀರಾ? ಪ್ರತಿದಿನ ಮೂವತ್ತು ನಿಮಿಷಗಳಿಗಿಂತ ಹೆಚ್ಚು ಕಾಲ ಮೊಬೈಲ್‌ನಲ್ಲಿ ಉಭಯ ಕುಶಲೋಪರಿ ನಡೆಸುತ್ತೀರಾ? ಹಾಗಾದರೆ ಕ್ರಮೇಣ ನಿಮ್ಮ ಕಿವಿಗಳು ಕೇಳುವ ಶಕ್ತಿಯನ್ನು ಕಳೆದುಕೊಳ್ಳಲಿದೆ.
 
ಇದು ತಮಾಷೆಯ ಮಾತಲ್ಲ. ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಕಿವಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ನರೇಶ್ ಕೆ. ಪಾಂಡ ತಮ್ಮ ಸಂಶೋಧನೆಯಲ್ಲಿ ಮೊಬೈಲ್‌ನಿಂದಾಗುವ ಈ ಅಪಾಯವನ್ನು ಪತ್ತೆ ಹಚ್ಚಿದ್ದಾರೆ. 
 
ಪ್ರಾರಂಭದಲ್ಲಿ ಚಂಡೀಗಡದ ನೂರು ಜನ ಧೀರ್ಘಕಾಲದ ಜಿಎಸ್‌ಎಮ್ ಮೊಬೈಲ್ ಬಳಕೆದಾರರ ಮೇಲೆ ಡಾ. ನರೇಶ್ ಹಾಗೂ ಅವರ ವೈದ್ಯಕೀಯ ತಂಡ ಪರೀಕ್ಷೆ ನಡೆಸಿತು. ಕಿವಿಯಲ್ಲಿ ಮೊರೆತ ಕೇಳುವುದು, ಕಿವಿ ಸೋರುವುದು, ಅಸಾದಾರಣ ಶಬ್ದ ಕೇಳಿದಂತಾಗುವುದು ಇತ್ಯಾದಿ ಸಮಸ್ಯೆಗಳನ್ನು ಧೀರ್ಘ ಕಾಲದಿಂದ ಮೊಬೈಲ್ ಫೋನ್ ಬಳಸುತ್ತಿರುವವರು ಎದುರಿಸುತ್ತಿದ್ದಾರೆ ಎಂದು ಈ ಸಂಶೋಧನೆಯಿಂದ ಧೃಡಪಟ್ಟಿದೆ.
 
ಮೊಬೈಲ್ ಪೋನ್‌ಗಳಿಂದ ಉತ್ಪತ್ತಿಯಾಗುವ ಎಲೆಕ್ಟ್ರೋಮ್ಯಾಗ್ನಟಿಕ್ ರೇಡಿಯೇಷನ್ಸ್‌ಗಳು ಕಿವಿ ತಮಟೆಯ ಮೇಲೆ ಪರಿಣಾಮ ಬೀರುತ್ತದೆ. ಕ್ರಮೇಣ ಕಿವಿ ತನ್ನ ದ್ವನಿಗ್ರಾಹಕ ಶಕ್ತಿಯನ್ನು ಕಳೆದುಕೊಂಡು ಮಂದವಾಗುತ್ತದೆ ಎಂದು ಸಂಶೋಧನೆಯ ವೇಳೆ ತಿಳಿದುಬಂದಿದ್ದು, ಮೊಬೈಲ್‌ನ್ನು ಕಿವಿಗೊತ್ತಿಕೊಂಡು ಧೀರ್ಘ ಕಾಲ ಸಂಭಾಷಣೆ ನಡೆಸುವುದು ಅಪಾಯ ಎಂದು ಸಂಶೋಧನಾ ತಂಡ ತಿಳಿಸಿದೆ. 
 
ಸಮಾಜದ ವಿವಿಧ ಕೇತ್ರಗಳಲ್ಲಿರುವ ಮೊಬೈಲ್ ಬಳಕೆದಾರರ ಮೇಲೆ ವಿಸೃತ ಸಂಶೋಧನೆ ನಡೆಸಲು ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ನಿರ್ಧರಿಸಿದ್ದು, ಈ ಯೋಜನೆಗಾಗಿ ಹಣಕಾಸಿನ ನೆರವು ಒದಗಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಗೆ ಮನವಿ ಸಲ್ಲಿಸಲಾಗಿದೆ ಎಂದು ಡಾ. ನರೇಶ್ ತಿಳಿಸಿದ್ದಾರೆ. 
 
ಮುಂದಿನ ತಿಂಗಳು ವಾಷಿಂಗ್ಟನ್‌ ಡಿಸಿಯಲ್ಲಿ ನಡೆಯಲಿರುವ ತಲೆ ಮತ್ತು ಕುತ್ತಿಗೆ ಕುರಿತಾದ ವಾರ್ಷಿಕ ಸಭೆಯಲ್ಲಿ ಈ ಸಂಶೋಧನೆಯನ್ನು ಮಂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ