ಬೆಂಗಳೂರು: ಋತುಮತಿಯಾಗುವ ಸಮಯದಿಂದ ಋತುಬಂಧದ ತನಕ ಮಹಿಳೆ ತನ್ನ ಮುಟ್ಟಿನ ವಿಚಾರವಾಗಿ ನಾನಾ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಂದು ಭಾರೀ ಯಾವ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು ಎನ್ನುವ ವಿಚಾರವೂ ಆಕೆಗೆ ಗೊತ್ತಾಗದೆ ನಾನಾ ರೀತಿಯ ಸಮಸ್ಯೆಯನ್ನು ಎದುರಿಸುವುದು ಉಂಟು.
ಈ ವಿಚಾರವಾಗಿ ಖ್ಯಾತ ಸ್ತ್ರೀ ರೋಗ ತಜ್ಞೆ ಪದ್ಮಿನಿ ಪ್ರಸಾದ್ ಅವರು ಟಿವಿ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.
ಮುಟ್ಟು ಕ್ರಮ ಬದ್ಧವಾಗಿ ಆಗದೇ ಇರುವುದು, ಹೆಚ್ಚಿನ ರಕ್ತಸ್ರಾವ, ಕಡಿಮೆ ರಕ್ತಸ್ರಾವ, ಹಲವಾರು ತಿಂಗಳು ಮುಟ್ಟು ಆಗದೆ ಇರುವುದು ಅಥವಾ 16, 18 ವರ್ಷವಾದರೂ ಋತುಮತಿಯಾಗದೆ ಇರುವುದು. ಋತುಮತಿಯಾಗುವುದರಿಂದ ಋತುಬಂಧ ತನಕ ಯಾವುದೇ ಸಂದರ್ಭದಲ್ಲಿಯೂ ಮುಟ್ಟಿನ ತೊಂದರೆಗಳು ಉಂಟಾಗಬಹುದು.
ಹದಿಹರೆಯದ ಸಮಯದಲ್ಲಿ ಮುಟ್ಟಿನ ತೊಂದರೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ದಾಂಪತ್ಯಕ್ಕೆ ಕಾಲಿಟ್ಟ ನಂತರ ಕಾಣಿಸಿಕೊಳ್ಳುವ ತೊಂದರೆಗಳು ಅಥವಾ ಋತುಬಂಧದ ಅಸುಪಾಸಿನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಬೇರೆ ಬೇರೆ ರೀತಿಯ ಚಿಕಿತ್ಸೆಗಳು ಲಭ್ಯವಿದೆ.
ಯಾವುದೇ ಸ್ತ್ರೀಗೆ ಋತುಬಂಧವಾಗಿ ಮುಟ್ಟು ಆಗದೆ ಇದ್ದಾಗ, ಅಧಿಕ ರಕ್ತಸ್ರಾವ, ಅತೀ ಹೆಚ್ಚಿನ ರಕ್ತಸ್ರಾವ, 6 ತಿಂಗಳ ಕಾಲ , ಒಂದು ವರ್ಷದವರೆಗೆ ಮುಟ್ಟು ಕಾಣಿಸಿಕೊಳ್ಳದೆ ಇದ್ದಾಗ, ಬಹಳ ಕಡಿಮೆ ರಕ್ತಸ್ರಾವ ಆಗುವುದು, ಮುಟ್ಟಿನ ಸಂದರ್ಭದಲ್ಲಿ ವಿಪರೀತ ಹೊಟ್ಟೆ, ಕಾಲು ಹಾಗೂ ಬೆನ್ನು ನೊವು ಕಾಣಿಸಿಕೊಂಡರೆ ವೈದ್ಯರ ಸಂಪರ್ಕ ಮಾಡುವುದು ಉತ್ತಮ.
ಇನ್ನೂ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಹಲವಾರು ಸ್ತ್ರೀಯರಲ್ಲಿ ಸಾಮಾನ್ಯ. ಕಡಿಮೆ ತರಹದ ಹೊಟ್ಟೆ ನೋವಿಗೆ ಆತಂಕ ಪಡಬೇಕಾಗಿಲ್ಲ. ಪ್ರತಿ ಮುಟ್ಟಿನ ಸಂದರ್ಭದಲ್ಲಿ ವಿಪರೀತ ಹೊಟ್ಟೆ, ಬೆನ್ನು, ತೊಡೆ ಭಾಗದಲ್ಲಿ ನೋವಿನ ತೀವ್ರತೆ ಇದ್ದಲ್ಲಿ ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ, ಪರೀಕ್ಷೆಗೆ ಒಳಪಡುವುದು ಉತ್ತಮ ಎಂದು ಡಾ. ಪದ್ಮಿನಿ ಪ್ರಸಾದ್ ಸಲಹೆ ನೀಡಿದರು