ಇತ್ತೀಚಿನ ದಿನಗಳಲ್ಲಿ ಜಂಗ್ಫುಡ್ ಎಂಬುದು ಎಲ್ಲರ ಅಚ್ಚುಮೆಚ್ಚಿನ ತಿನಿಸಾಗಿದೆ. ಪಿಜ್ಜಾ , ಬರ್ಗರ್ , ಟ್ಯಾಕೋಸ್ ಹೀಗೆ ಫಾಸ್ಟ್ಪುಡ್ಗಳ ಪಟ್ಟಿಯಲ್ಲಿ ಬರುವ ಈ ತಿನಿಸುಗಳು ಬಾಯಿಗೆ ರುಚಿಕರವಾಗಿದ್ದು ಶೀಘ್ರದಲ್ಲೇ ಹೊಟ್ಟೆ ತುಂಬಿಸುತ್ತವೆ.
ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದಿರುವ ಈ ಆಹಾರಗಳು ಭಾರತೀಯ ತಿನಿಸುಗಳಿಗಿಂತಲೂ ಪ್ರತ್ಯೇಕವಾಗಿ ರುಚಿಯಲ್ಲೂ ವೈವಿಧ್ಯಮಯವಾದ ಅನುಭೂತಿ ನೀಡುತ್ತವೆ. ಆದರೆ ಈ ಆಹಾರಗಳು ಸುರಕ್ಷಿತ ಮತ್ತು ಕಡಿಮೆ ಹಾನಿಕಾರಕ ಎಂದು ನೀವು ಭಾವಿಸಿದ್ದರೆ ತಪ್ಪು. ಇವು ಅನೇಕ ಆರೋಗ್ಯ ಸಮಸ್ಯೆಗಳು ಹಾಗೂ ಬಂಜೆತನಕ್ಕೆ ಕಾರಣವಾಗಲಿವೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಆಘಾತ ಮೂಡಿಸಿದ ವರದಿ
ಹೌದು, ಈ ಆಹಾರಗಳು ಅನೇಕ ಆರೋಗ್ಯ ಸಮಸ್ಯೆಗಳು ಹಾಗೂ ಬಂಜೆತನಕ್ಕೆ ಕಾರಣವಾಗಿರುವ ರಾಸಾಯನಿಕಗಳನ್ನು ಒಳಗೊಂಡಿದ್ದು ಇವುಗಳನ್ನು ತಯಾರಿಸುವ ಬಳಸುವ ಮಸಾಲೆಗಳಲ್ಲಿ ಥಾಲೇಟ್ಸ್ನಂತಹ ರಾಸಾಯನಿಕಗಳು ಇರುವುದಾಗಿ ಕೆಲವೊಂದು ಅಧ್ಯಯನಗಳು ಕಂಡುಹಿಡಿದಿವೆ.
ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ, ಸೌತ್ವೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸ್ಯಾನ್ ಆಂಟೋನಿಯೊ, ಟೆಕ್ಸಾಸ್), ಬೋಸ್ಟನ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಜೊತೆಯಾಗಿ ನಡೆಸಿದ ಅಧ್ಯಯನವನ್ನು ಜರ್ನಲ್ ಆಫ್ ಎಕ್ಸ್ಪೋಸರ್ ಸೈನ್ಸ್ ಮತ್ತು ಎನ್ವಿರಾನ್ಮೆಂಟಲ್ ಎಪಿಡೆಮಿಯಾಲಜಿಯಲ್ಲಿ ಪ್ರಕಟಿಸಿದ್ದು ಇದು ತೀವ್ರ ಆರೋಗ್ಯ ಸಮಸ್ಯೆಗಳನ್ನುಂಟು ಮಾಡಲಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ. ಎಲ್ಲಾ ಬಗೆಯ ಜಂಗ್ಫುಡ್ಗಳ ಪರೀಕ್ಷೆ
ಹೆಚ್ಚಿನ ಫಾಸ್ಟ್ಫುಡ್ ಸಂಸ್ಥೆಗಳಾದ ಮೆಕ್ಡೊನಾಲ್ಡ್, ಬರ್ಗರ್ ಕಿಂಗ್, ಪಿಜ್ಜಾ ಹಟ್, ಡಾಮಿನೋಸ್, ಟಾಕೊ ಬೆಲ್ನ ಆಹಾರ ಪದಾರ್ಥಗಳನ್ನು ಪರೀಕ್ಷಿಸಿದ್ದು ಅವುಗಳ ಆಹಾರ ಉತ್ಪನ್ನಗಳಾದ ಹ್ಯಾಂಬರ್ಗರ್ಗಳು, ಚಿಕನ್ ನಗ್ಗೆಟ್ಸ್, ಫ್ರೈಸ್, ಬರ್ರಿಟೋಸ್ ವಿತ್ ಚಿಕನ್, ರೈಸ್, ಬೀನ್ಸ್, ಸಾಲ್ಸಾ ಮೊದಲಾದವುಗಳಲ್ಲಿ ಅಧಿಕ ಪ್ರಮಾಣದ ರಾಸಾಯನಿಕಗಳಿರುವುದನ್ನು ಪತ್ತೆಹಚ್ಚಿವೆ. ಫಾಸ್ಟ್ಫುಡ್ಗಳಲ್ಲಿ ಪತ್ತೆಯಾದ ರಾಸಾಯನಿಕಗಳು
ಸುಮಾರು 80% ಮಾದರಿಗಳು ಥಾಲೇಟ್ಸ್ ಎಂದು ಕರೆಯಲ್ಪಡುವ ರಾಸಾಯನಿಕ ಒಳಗೊಂಡಿವೆ, ಇದು ಮೂಲತಃ ಪ್ಲಾಸ್ಟಿಕ್ ಅನ್ನು ಮೃದುವಾದ ಮತ್ತು ಹೆಚ್ಚು ಹೊಂದಿಕೊಳ್ಳುವಂತೆ ಮಾಡಲು ಬಳಸುವ ರಾಸಾಯನಿಕಗಳ ವರ್ಗವಾಗಿದೆ. ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
ಥಾಲೇಟ್ಸ್ ಎಂದು ಕರೆಯಲ್ಪಡುವ ರಾಸಾಯನಿಕವು ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ಅಲ್ಪಕಾಲದ ಮರಣಕ್ಕೆ ಸಂಬಂಧಿಸಿದೆ ಎಂಬುದನ್ನು ಗಮನಿಸಲಾಗಿದೆ ಮತ್ತು ವಿಶ್ಲೇಷಿಸಲಾಗಿದೆ. ಥಾಲೇಟ್ಗಳು ಹಾರ್ಮೋನಿನ ಕಾರ್ಯಕ್ಕೆ ಅಡ್ಡಿಪಡಿಸುತ್ತವೆ, ಇದು ಫಲವತ್ತತೆ ಮತ್ತು ಮಗುವಿನ ಬೆಳವಣಿಗೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದೇ ರೀತಿ ಈ ರಾಸಾಯನಿಕಗಳನ್ನು ದೇಹದಲ್ಲಿ ಹೊಂದಿರುವ ಜನರು ಬೇಗನೇ ಮರಣವನ್ನಪ್ಪುವ ಸಾಧ್ಯತೆ ಇದೆ ಎಂಬುದು ಅಧ್ಯಯನಗಳಿಂದ ಖಾತ್ರಿಯಾಗಿದೆ. ಅಧ್ಯಯನದಲ್ಲಿ ಕಂಡುಬಂದ ಅಂಶಗಳೇನು
ಸೇವಿಸಬಹುದಾದ ಆಹಾರಗಳಲ್ಲಿ ಕಂಡುಬರುವ ರಾಸಾಯನಿಕಗಳು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗವು 2017ರಲ್ಲಿ ಮಕ್ಕಳ ಆಟಿಕೆಗಳಲ್ಲಿ ಕಂಡುಬರುವ ಎಂಟು ವಿಧದ ಥಾಲೇಟ್ಗಳ ಬಳಕೆಯನ್ನು ನಿಷೇಧಿಸಿತ್ತು. ನಿಷೇಧದ ಹೊರತಾಗಿಯೂ ಈ ಉತ್ಪನ್ನಗಳನ್ನು ಆಟಿಕೆಗಳಲ್ಲಿ ಬಳಸಲಾಗುತ್ತಿದೆ. ಫಾಸ್ಟ್ಫುಡ್ಗಳಲ್ಲಿ ಕೂಡ ಇವುಗಳಲ್ಲಿ ನಾಲ್ಕು ಬಗೆಯ ಥಾಲೇಟ್ಗಳನ್ನು ಬಳಸಲಾಗಿದೆ ಎಂದು ಅಧ್ಯಯನಗಳು ತಿಳಿಸಿವೆ.