ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ ಡೆಂಗ್ಯೂ ಪ್ರಕರಣ
ಶುಕ್ರವಾರ, 17 ಫೆಬ್ರವರಿ 2017 (18:36 IST)
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಜ್ವರ ಹೆಚ್ಚಾಗುತ್ತಿದೆ. ಪ್ರತಿದಿನ ಕನಿಷ್ಠ ಮೂರು ಪ್ರಕರಣಗಳಲ್ಲಿ ಡೆಂಗ್ಯೂ ಜ್ವರ ಇರುವುದು ಪತ್ತೆಯಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿಅಂಶಗಳ ಪ್ರಕಾರ ಕಳೆದ 30 ದಿನಗಳಲ್ಲಿ ಡೆಂಗ್ಯೂ ಇರುವ ಹೊಸ 82 ಪ್ರಕರಣಗಳು ದಾಖಲಾಗಿವೆ. ಮೇ 23 ರ ವೇಳೆಗೆ ಕೇವಲ 44 ಡೆಂಗ್ಯೂ ಜ್ವರ ಪ್ರಕರಣಗಳು ದಾಖಲಾಗಿದ್ದರೆ, ಜೂನ್ 22 ರ ವೇಳೆಗೆ ಈ ಸಂಖ್ಯೆ 126 ಕ್ಕೆ ಏರಿಕೆ ಆಗಿದೆ.
ಪ್ರತಿ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆಯೇ ಬಿಬಿಎಂಪಿಯ ಆರೋಗ್ಯ ಇಲಾಖೆ ಸಿಬ್ಬಂದಿ ರೋಗಿಗಳ ಮನೆಗಳಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
``24 ವರ್ಷದ ಯುವತಿ ನಾಲ್ಕು ದಿನಗಳಿಂದ ಅತಿಯಾದ ಜ್ವರ, ಮೈಕೈ ನೋವು ಮತ್ತು ವಾಂತಿಯಿಂದ ಬಳಲಿ ವೈದ್ಯರ ಬಳಿಗೆ ಚಿಕಿತ್ಸೆಗೆಂದು ಬರುತ್ತಾಳೆ. ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಡಬ್ಲ್ಯೂಬಿಸಿ ಮತ್ತು ಪ್ಲೇಟ್ಲೇಟ್ ಪ್ರಮಾಣದಲ್ಲಿ ಗಣನೀಯ ಕುಸಿತ ಉಂಟಾಗಿರುವುದು ಪತ್ತೆಯಾಗುತ್ತದೆ. ಮತ್ತಷ್ಟು ತಪಾಸಣೆ ನಡೆಸಿದಾಗ ಆಕೆಯಲ್ಲಿ ಎನ್‍ಎಸ್1 ಡೆಂಗ್ಯೂ ಸೋಂಕು ತಗುಲಿರುವುದು ಗೊತ್ತಾಗುತ್ತದೆ. ಅದೇ ರೀತಿ 3 ದಿನಗಳಿಂದ ಜ್ವರ ಮತ್ತು ವಾಂತಿಯಿಂದ ಬಳಲುತ್ತಿದ್ದ 18 ವರ್ಷದ ಯುವಕನ ತಪಾಸಣೆ ನಡೆಸಿದಾಗ ಆತನಲ್ಲಿಯೂ ಪ್ಲೇಟ್ಲೇಟ್ ಸಂಖ್ಯೆ ಕಡಿಮೆಯಾಗಿರುವುದು ಕಂಡುಬರುತ್ತದೆ. ಇದೊಂದು ವೈರಲ್ ಫೀವರ್ ಆಗಿದ್ದು, ಡೆಂಗ್ಯೂ ನೆಗೆಟಿವ್ ಎಂದು ಗೊತ್ತಾಯಿತು’’ ಎಂದು ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಫಿಸಿಶಿಯನ್ ಡಾ.ಅಶೋಕ್ ಹೇಳುತ್ತಾರೆ.
ಈ ರೋಗ ಲಕ್ಷಣಗಳು ಕೆಲವೊಮ್ಮೆ ಕಡಿಮೆ ಪ್ರಮಾಣದಲ್ಲಿ ಜ್ವರ ಬಂದಾಗ ವೈರಲ್ ಇನ್‍ಫೆಕ್ಷನ್ ಆಗಿರಬೇಕೆಂದು ತಪ್ಪು ಕಲ್ಪನೆಯಲ್ಲಿರುತ್ತಾರೆ. ಚಿಕ್ಕ ಮಕ್ಕಳಲ್ಲಿ ಈ ರೀತಿ ಇನ್‍ಫೆಕ್ಷನ್ ಆಗಿರುವುದಿಲ್ಲ. ಆದ್ದರಿಂದ ಜ್ವರವನ್ನು ನಿರ್ಲಕ್ಷಿಸಲಾಗುತ್ತದೆ. ಆದರೆ, ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು. ಅತಿಯಾದ ಜ್ವರ ಬಂದು ಲಿಂಪ್ ಮತ್ತು ರಕ್ತ ನಾಳಗಳನ್ನು ಹಾನಿಗೊಳಿಸಬಹುದು, ಮೂಗಿನಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳಬಹುದು, ಲಿವರ್‍ನ ಗಾತ್ರವನ್ನು ಹಿಗ್ಗಿಸುತ್ತದೆ ಮತ್ತು ರಕ್ತನಾಳ ವ್ಯವಸ್ಥೆಯಲ್ಲಿ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದರ ಪರಿಣಾಮ ಅತಿಯಾದ ರಕ್ತಸ್ರಾವ ಮತ್ತು ಸಾವಿನಂಚಿಗೂ ಕೊಂಡೊಯ್ಯುವ ಸಾಧ್ಯತೆಗಳಿವೆ. ಇದಕ್ಕೆ ಡಂಗ್ಯೂ ಶಾಕ್ ಸಿಂಡ್ರೋಮ್(ಡಿಎಸ್‍ಎಸ್) ಎಂದು ಕರೆಯಲಾಗುತ್ತದೆ.
ಬೇವು ಮತ್ತು ತುಳಸಿ ಎಲೆಗಳನ್ನು ಸೇವಿಸುವುದರಿಂದ ಮಾನ್‍ಸೂನ್ ವೇಳೆ ಕಾಣಿಸಿಕೊಳ್ಳಲಿರುವ ಇನ್‍ಫೆಕ್ಷನ್‍ಗಳನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ. ತುಳಸಿ ಕೇವಲ ವೈರಲ್ ಇನ್‍ಫೆಕ್ಷನ್‍ಗೆ ಪರಿಹಾರ ಮಾತ್ರವಲ್ಲ, ಇದರ ಜತೆಗೆ ಶುಂಠಿಯನ್ನು ಸೇರಿಸಿ ಸೇವಿಸಿದಾಗ ಉಸಿರಾಟದಂತಹ ತೊಂದರೆಗಳೂ ಪರಿಹಾರವಾಗುತ್ತವೆ.
ಕರಾವಳಿ ಪ್ರದೇಶಗಳಲ್ಲಿ ಬೆಳೆಯುವ ಗೂಸ್‍ಬೆರ್ರಿ, ಮೆಣಸು ಮತ್ತು ಶುಂಠಿ ಅತ್ಯುತ್ತಮವಾದ ಕ್ಷಾರಕ ನಿವಾರಣಾ ಪದಾರ್ಥಗಳಾಗಿವೆ. ಈ ನೈಸರ್ಗಿಕ ಉತ್ಪನ್ನಗಳು ಶ್ವಾಸನಾಳಗಳ ಇನ್‍ಫೆಕ್ಷನ್, ವೈರಲ್ ರೋಗಾಣುಗಳನ್ನು ಹೊಡೆದೋಡಿಸುವ ಶಕ್ತಿ ಹೊಂದಿವೆ ಎನ್ನುತ್ತಾರೆ ತಜ್ಞರು.
1000 ಕ್ಕಿಂತಲೂ ಅಧಿಕ ಯೋಗ ಕೇಂದ್ರಗಳನ್ನು ಹೊಂದಿರುವ ಯೋಗ ತಜ್ಞರಾದ ಕಲಾ ನೆಹೆತೆ ಅವರು ಹೇಳುವಂತೆ, ``ಪ್ರತಿದಿನ ಯೋಗವನ್ನು ಮಾಡುತ್ತಾ ನಿಗದಿತ ಪ್ರಮಾಣದಲ್ಲಿ ನಿಂಬೆ ಎಲೆ, ತುಳಸಿ ಮತ್ತು ಶುಂಠಿಯನ್ನು ಸೇವಿಸಿದರೆ ಡೆಂಗ್ಯೂ ಸೇರಿದಂತೆ ಎಲ್ಲಾ ಬಗೆಯ ವೈರಲ್ ಫೀವರ್‍ನಂತಹ ರೋಗಗಳು ಬರುವುದಿಲ್ಲ’’.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.