ಹಗಲು ಹೊತ್ತು ಎಷ್ಟು ಹೊತ್ತು ನಿದ್ರೆ ಮಾಡಿದರೆ ಉತ್ತಮ

Krishnaveni K

ಬುಧವಾರ, 13 ಮಾರ್ಚ್ 2024 (11:45 IST)
ಬೆಂಗಳೂರು: ಕೆಲವರಿಗೆ ಮಧ್ಯಾಹ್ನದ ಊಟದ ನಂತರ ಕೆಲವು ಕ್ಷಣ ನಿದ್ರೆ ಮಾಡಲೇಬೇಕೆನಿಸುತ್ತದೆ. ಈ ರೀತಿ ಹಗಲು ಹೊತ್ತು ಮಲಗುವುದು ಆರೋಗ್ಯಕರ ಅಭ್ಯಾಸವೇ ಎಂದು ತಿಳಿದುಕೊಳ್ಳಲು ಇಲ್ಲಿ ನೋಡಿ.

ಹಗಲು ಹೊತ್ತು ಊಟದ ನಂತರ ಅಥವಾ ಬೆಳಿಗ್ಗೆ ತಿಂಡಿ ನಂತರ ಏನೂ ಕೆಲಸವಿಲ್ಲದೇ ಇದ್ದಾಗ ಕೆಲವು ಹೊತ್ತು ಮಲಗಿ ನಿದ್ರೆ ಮಾಡಿಬಿಡುತ್ತೇವೆ. ಇದರಿಂದ ಒಳ್ಳೆಯ ಮತ್ತು ಕೆಟ್ಟ ಎರಡೂ ರೀತಿಯ ಪರಿಣಾಮಗಳಿವೆ. ಹಗಲು ಹೊತ್ತು ನಿದ್ರೆ ಮಾಡುವುದು ಆರೋಗ್ಯಕರವೇ ಎಂದು ತಿಳಿಯಲು ನಾವು ಎಷ್ಟು ಹೊತ್ತು ನಿದ್ರೆ ಮಾಡುತ್ತೇವೆ ಎಂಬುದರ ಮೇಲೆ ಅವಲಂಬಿಸಿರುತ್ತದೆ.

ಹಗಲು ಹೊತ್ತು ಅತಿಯಾಗಿ ಮಲಗಿ ನಿದ್ರಿಸುವುದು ಖಂಡಿತಾ ಒಳ್ಳೆಯದಲ್ಲ. ಒಬ್ಬ ವ್ಯಕ್ತಿ ಹಗಲು 30 ನಿಮಿಷಗಳವರೆಗೆ ಸಣ್ಣದಾದ ನಿದ್ರೆ ಮಾಡಬಹುದು. ಇದರಿಂದ ನಮ್ಮ ಮನಸ್ಸು, ದೇಹ ಎರಡಕ್ಕೂ ವಿಶ್ರಾಂತಿ ಸಿಗುತ್ತದೆ. ಮತ್ತೆ ಕೆಲಸ ಮಾಡಲು ಉತ್ಸಾಹ ಬರುತ್ತದೆ. ಆದರೆ ಇದಕ್ಕಿಂತ ಹೆಚ್ಚು ನಿದ್ರೆ ಮಾಡಿದರೆ ಅಪಾಯವೂ ಇದೆ.

ರಾತ್ರಿಯಂತೇ ಗಂಟೆಗಟ್ಟಲೆ ಹಗಲು ಮಲಗಿ ನಿದ್ರಿಸುವುದರಿಂದ ತೂಕ ಹೆಚ್ಚಳವಾಗಿ ದಪ್ಪಗಾಗುವ ಅಪಾಯವಿದೆ. ಜೊತೆಗೆ ಹಗಲು ಹೆಚ್ಚು ಹೊತ್ತು ನಿದ್ರಿಸುವುದರಿಂದ ರಾತ್ರಿ ನಿದ್ರೆ ಬಾರದೇ ನಿದ್ರಾಹೀನತೆ ಸಮಸ್ಯೆ ಬರಬಹುದು. ಅಲ್ಲದೆ ಅತಿಯಾಗಿ ನಿದ್ರಿಸುವುದದರಿಂದ ಮೈ ಜಡವಾಗಿ ಸೋಮಾರಿತನ ಬರಬಹುದು.  ತೀರಾ ವಿಶ್ರಾಂತಿ ಬೇಕು ಎನಿಸಿದರೆ ಮಾತ್ರ ಅರ್ಧಗಂಟೆ ಮಲಗಿ ನಿದ್ರಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ