ಶರೀರ ಎಂಬುದನ್ನು ಪ್ರಕೃತಿ ನಮಗೆ ನೀಡಿರುವ ಒಂದು ಅದ್ಭುತ ಯಂತ್ರಕ್ಕೆ ಹೋಲಿಸಬಹುದಾದರೆ ವ್ಯಾಯಾಮ ಎಂಬುದು ಅದನ್ನು ಸುಸ್ಥಿತಿಯಲ್ಲಿಡುವಂತೆ ನಿರ್ವಹಣೆ ಮಾಡುವ ವಿಧಾನ. ಆದುದರಿಂದ ವ್ಯಾಯಾಮ ಹವ್ಯಾಸವಲ್ಲ, ಬದಲಿಗೆ ದಿನಚರಿಯಾಗಬೇಕು.
ಅದಕ್ಕೆ ದೇಹದೊಂದಿಗೇ ಮನಸ್ಸನ್ನು ಸಿದ್ಧಗೊಳಿಸುವುದು ಮುಖ್ಯ. ವ್ಯಾಯಾಮ ಕಡ್ಡಾಯವಾದರೂ ಯಾವ ರೀತಿಯ ವ್ಯಾಯಾಮ, ಸಮಯ ಎಂಬುದು ಅವರವರ ಆಯ್ಕೆ. ಕೆಲವರಿಗೆ ಬೆಳಿಗ್ಗೆ ಬೇಗ ಎದ್ದು ಓಡುವುದು ಸುಲಭವಾದರೆ ಮತ್ತೆ ಹಲವರಿಗೆ ಸಂಜೆ ಗೆಳೆಯರೊಡನೆ ಆಟ ಆಡುವುದು ಇಷ್ಟ. ಅನೇಕರಿಗೆ ಮಧ್ಯಾಹ್ನದ ವಾಕ್ ಹೆಚ್ಚು ಸೂಕ್ತ.
ಜೈವಿಕ ಗಡಿಯಾರ
ನಮ್ಮ ದೇಹದ ಜೈವಿಕ ಗಡಿಯಾರ ದೇಹದ ಕ್ರಿಯೆಗಳಾದ ರಕ್ತದೊತ್ತಡ, ಉಷ್ಣತೆ, ಹೃದಯಬಡಿತ, ಹಾರ್ಮೋನ್ಗಳ ಮಟ್ಟ ಎಲ್ಲದರ ಮೇಲೆ ಪ್ರಭಾವ ಹೊಂದಿದೆ. ಇವೆಲ್ಲವೂ ನಮ್ಮ ವ್ಯಾಯಾಮದ ಸಿದ್ಧತೆಗೆ ಅಗತ್ಯ. ವ್ಯಕ್ತಿಯಿಂದ ವ್ಯಕ್ತಿಗೆ ಈ ಜೈವಿಕ ಗಡಿಯಾರದಲ್ಲಿ ವ್ಯತ್ಯಾಸವಿರುತ್ತದೆ. ಹಾಗಾಗಿ ಜೈವಿಕ ಗಡಿಯಾರವನ್ನು ಅನುಸರಿಸಿ ವ್ಯಾಯಾಮವನ್ನು ಮಾಡುವುದು ಉತ್ತಮ ಆಯ್ಕೆ; ಆದರೆ ಜೈವಿಕ ಗಡಿಯಾರವನ್ನು ಕೀಲಿ ಕೊಟ್ಟು ನಮಗೆ ಬೇಕಾದಂತೆ ಬದಲಿಸಲು ಸಾಧ್ಯವಿಲ್ಲ. ಹೀಗಿರುವಾಗ ಯಾವಾಗ ವ್ಯಾಯಾಮ ಮಾಡಿದರೆ ಅತ್ಯಂತ ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಮೂಡುವುದು ಸಹಜ. ಯಾವಾಗಲಾದರೂ ಸರಿ; ನಿಯಮಿತವಾಗಿ ದಿನವೂ ಒಂದೇ ಸಮಯಕ್ಕೆ ವ್ಯಾಯಾಮ ಮಾಡುವುದು ಮುಖ್ಯ. ಏಕೆಂದರೆ ಬೆಳಿಗ್ಗೆ ಮತ್ತು ಸಂಜೆಯ ಸಮಯಗಳೆರಡರಲ್ಲೂ ಬೇರೆ ಬೇರೆ ಲಾಭಗಳಿವೆ.
ಅನುಸರಿಸಲು ಸುಲಭ
ಬೆಳಗಿನ ಸಿಹಿ ನಿದ್ದೆ ಬಿಟ್ಟು ಎದ್ದು ವ್ಯಾಯಾಮ ಮಾಡಲು ದೃಢ ಮನಸ್ಸು ಬೇಕು. ಒಂದರ ನಂತರ ಇನ್ನೊಂದು ಕೆಲಸ ಬಂದು ಕಡೆಗೆ ಸಮಯ ಸಾಲದೇ ವ್ಯಾಯಾಮ ಮಾತ್ರ ಮರುದಿನಕ್ಕೆ ಮುಂದೂಡಲ್ಪಡುತ್ತದೆ. ಇದೇ ಚಕ್ರ ಹಾಗೇ ಮುಂದುವರಿಯುವುದೂ ಇದೆ. ಮಧ್ಯಾಹ್ನ-ರಾತ್ರಿ ವ್ಯಾಯಾಮಕ್ಕೆ ಸಮಯ ನಿಗದಿಪಡಿಸಿದಾಗ ಇತರ ಜವಾಬ್ದಾರಿಗಳ ಜತೆ ನಿರ್ವಹಣೆ ಕಷ್ಟಸಾಧ್ಯ. ಕೆಲವು ಬಾರಿ ಇತರ ಕೆಲಸಗಳ ಒತ್ತಡ ಹೆಚ್ಚಿದಾಗ ಮನಸ್ಸಿಗೆ ವ್ಯಾಯಾಮ ಮಾಡುವ ಆಸಕ್ತಿ ಮತ್ತು ದೇಹಕ್ಕೆ ಶಕ್ತಿ ಎರಡೂ ಇರುವುದಿಲ್ಲ. ಹೀಗಾಗಿ ಬೆಳಿಗ್ಗೆ ಎದ್ದ ಕೂಡಲೇ ಮನಸ್ಸು ಏನಾದರೂ ನೆಪ ಹುಡುಕುವ ಮೊದಲೇ ದೃಢ ಮನದಿಂದ ವ್ಯಾಯಾಮಕ್ಕೆ ತಯಾರಾದರೆ ಅದನ್ನು ದಿನಚರಿಯ ಭಾಗವನ್ನಾಗಿ ಮಾಡುವುದು ಸುಲಭ.
ನಿದ್ದೆಗೆ ಸಹಾಯ
ರಾತ್ರಿ ವೇಳೆ ವ್ಯಾಯಾಮ ಮಾಡಿದಾಗ ನಿದ್ದೆಯ ಸಮಯದಲ್ಲಿ ವ್ಯತ್ಯಾಸಗಳು ಆಗಬಹುದು. ವ್ಯಾಯಾಮದಿಂದ ಹೃದಯದ ಬಡಿತ, ದೇಹದ ಉಷ್ಣತೆ ಹೆಚ್ಚುತ್ತದೆ. ನಿದ್ದೆಯ ಮುನ್ನ ದೇಹದ ಎಲ್ಲಾ ಕ್ರಿಯೆಗಳು ನಿಧಾನವಾಗಬೇಕು. ಹೀಗಾಗಿ ಬೆಳಿಗ್ಗೆಯೇ ವ್ಯಾಯಾಮ ಮುಗಿದಿದ್ದರೆ ದೇಹಕ್ಕೆ ಶ್ರಮವಾಗಿ ದಣಿದಿರುತ್ತದೆ, ರಾತ್ರಿ ಸುಖ ನಿದ್ದೆ ಸಾಧ್ಯ.
ಕೊಬ್ಬು ಕರಗುವಿಕೆ
ಸಾಧಾರಣವಾಗಿ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ರೂಢಿ. ಸುಮಾರು ಎಂಟರಿಂದ ಹತ್ತು ಗಂಟೆಗಳ ಕಾಲ ಹೊಟ್ಟೆಯಲ್ಲಿ ಯಾವುದೇ ಆಹಾರ ಇರುವುದಿಲ್ಲ. ಹೀಗಿರುವಾಗ ವ್ಯಾಯಾಮ ಮಾಡಿದರೆ ದೇಹದ ಅನಗತ್ಯ ಕೊಬ್ಬು (ಕೆಟ್ಟ ಕೊಲೆಸ್ಟ್ರಾಲ್) ಹೆಚ್ಚು ಕರಗುತ್ತದೆ. ಸಂಜೆ ವೇಳೆಯಲ್ಲಿ ಹೊಟ್ಟೆಯಲ್ಲಿ ಸ್ವಲ್ಪವಾದರೂ ಆಹಾರವಿರುತ್ತದೆ.
ಕಡಿಮೆ ಹಸಿವು
ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ಹಸಿವು ಕಡಿಮೆಯಾಗುತ್ತದೆ. ದೇಹಕ್ಕೆ ಬೇಕಾದಷ್ಟೇ ಆಹಾರವನ್ನು ಸೇವಿಸಬಹುದು. ಹೀಗಾಗಿ ದಿನವಿಡೀ ಬಾಯಾಡುವ ಆ ಮೂಲಕ ತೂಕ ಹೆಚ್ಚಿಸುವ ಪ್ರವೃತ್ತಿಯನ್ನು ತಡೆಗಟ್ಟಬಹುದು.
ದೇಹದ ಉಷ್ಣತೆ
ನಮ್ಮ ದೇಹದ ಉಷ್ಣತೆ ಬೆಳಿಗ್ಗೆ ಎದ್ದಾಗಲಿಂದ ನಿಧಾನವಾಗಿ ಹೆಚ್ಚುತ್ತಾ ಮಧ್ಯಾಹ್ನದ ಹೊತ್ತಿಗೆ ಗರಿಷ್ಠ ಮಟ್ಟ ತಲುಪುತ್ತದೆ. ಮಾಂಸಖಂಡಗಳ ಸಾಮರ್ಥ್ಯ, ಸಹನಶಕ್ತಿ, ಬಾಗುವಿಕೆ ಈ ಸಮಯದಲ್ಲಿ ಹೆಚ್ಚಿರುವುದರಿಂದ ವ್ಯಾಯಾಮ ಮಾಡುವುದು ಸುಲಭ. ಅದೇ ರಾತ್ರಿಯ ವಿಶ್ರಾಂತಿಯಿಂದ ಎದ್ದ ಕೂಡಲೇ ಮಾಂಸಖಂಡಗಳು ಬಿಗಿಯಾಗಿದ್ದು, ಬಾಗಿ-ಬಳುಕುವುದು ಕಷ್ಟ. ಹೀಗಾಗಿ ಬೆಳಿಗ್ಗೆ ವ್ಯಾಯಾಮ ಮಾಡುವಾಗ ಪೂರ್ವ ತಯಾರಿಯ ಉಷ್ಣತೆ ಹೆಚ್ಚಿಸುವ 'ವಾರ್ಮ್ ಅಪ್'ಗೆ ಹೆಚ್ಚು ಸಮಯ ಬೇಕು. ಇಲ್ಲದಿದ್ದಲ್ಲಿ ಸ್ನಾಯುಗಳಿಗೆ ಪೆಟ್ಟಾಗುವ ಸಾಧ್ಯತೆ ಹೆಚ್ಚು.
ವೇಗದ ಪ್ರತಿಕ್ರಿಯೆ
ಯುವಜನರಲ್ಲಿ ಯಾವುದೇ ಕ್ರಿಯೆಗೆ ಪ್ರತಿಕ್ರಿಯಿಸುವ ಸಮಯ ಅತ್ಯಂತ ವೇಗವಾಗಿರುವುದು ಮಧ್ಯಾಹ್ನ. ಕಠಿಣ ದೈಹಿಕ ಶ್ರಮದ ಜತೆ ಮಾನಸಿಕ ಕೌಶಲವೂ ಅವಶ್ಯಕವಾದ ಹಾಕಿ, ಶಟಲ್, ಫುಟ್ಬಾಲ್, ಟೆನಿಸ್, ಕಬಡ್ಡಿ ಇಂಥ ಆಟಗಳನ್ನು ಮಧ್ಯಾಹ್ನ ಆಡುವುದು ಸೂಕ್ತ.
ತೂಕ ಇಳಿಕೆ
ದೇಹದ ಎಲ್ಲಾ ಕ್ರಿಯೆಗಳೂ ವೇಗವಾಗಿ ನಡೆಯುತ್ತಿರುವುದರಿಂದ ದೇಹದಲ್ಲಿ ಕ್ಯಾಲರಿ ಕೂಡ ವೇಗವಾಗಿ ಕರಗುತ್ತದೆ. ಹೀಗಾಗಿ ತೂಕ ಇಳಿಕೆ ಸುಲಭ.
ಹಾರ್ಮೋನ್ಗಳ ಪ್ರಭಾವ
ದೇಹದ ಮಾಂಸಖಂಡಗಳ ಬೆಳವಣಿಗೆ ಮತ್ತು ಸಾಮರ್ಥ್ಯದಲ್ಲಿ ನಿರ್ದಿಷ್ಟ ಹಾರ್ಮೋನ್ಗಳ ಪ್ರಭಾವವಿದೆ. ಇವುಗಳು ಮಧ್ಯಾಹ್ನದ ನಂತರ ಹೆಚ್ಚುತ್ತವೆ. ಹಾಗೆಯೇ ಕೊಬ್ಬಿನ ಶೇಖರಣೆ ಮತ್ತು ಮಾಂಸಖಂಡಗಳ ಸಂಕುಚನಕ್ಕೆ ಕಾರಣವಾಗುವ ಕಾರ್ಟಿಸಾಲ್ ಎಂಬ ಸ್ಟ್ರೆಸ್ ಹಾರ್ಮೋನ್, ಮುಂಜಾನೆ ಅಧಿಕವಾಗಿದ್ದು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.
ವ್ಯಾಯಾಮ ಮಾಡಲು ನಮಗೆ ಸೂಕ್ತವಾದ ಸಮಯವನ್ನು ಕಂಡುಕೊಳ್ಳಲು ಕೆಲವು ಕಾಲ ಬೆಳಿಗ್ಗೆ ಮತ್ತು ಒಂದಷ್ಟು ದಿನ ಸಂಜೆ ಎರಡನ್ನೂ ಪ್ರಯತ್ನಿಸಬಹುದು. ಯಾವುದು ನಮಗೆ ಸುಲಭ ಮತ್ತು ಅನುಕೂಲ ಎಂಬುದನ್ನು ನಿರ್ಧರಿಸಿ ನಂತರ ನಿಯಮಿತವಾಗಿ ಅನುಸರಿಸಿದರೆ ವ್ಯಾಯಾಮದ ಪ್ರಯೋಜನಗಳನ್ನು ಪಡೆಯಲು ಸಾಧ್ಯ. ಒಟ್ಟಿನಲ್ಲಿ ಯಾವುದೇ ಆಗಲಿ ಸಮಯ, ವ್ಯಾಯಾಮ ಮಾತ್ರ ಕಡ್ಡಾಯ!