ಬೆಂಗಳೂರು: ಅತ್ತಿಗೆ-ನಾದಿನಿ ಸಂಬಂಧವೂ ಎಲ್ಲಾ ಮನೆಗಳಲ್ಲಿ ಚೆನ್ನಾಗಿರುತ್ತದೆ ಎನ್ನಲು ಸಾಧ್ಯವಿಲ್ಲ. ಪ್ರೀತಿಯ ಅಣ್ಣನಿಗೆ ಹೆಂಡತಿಯೊಬ್ಬಳು ಮನೆಗೆ ಬಂದಾಗ ಎಲ್ಲಾ ನಾದಿನಿಯರು ಅದನ್ನು ಒಳ್ಳೆ ಮನಸ್ಸಿನಿಂದ ಸ್ವೀಕರಿಸುತ್ತಾರೆ ಎನ್ನಲು ಸಾಧ್ಯವಿಲ್ಲ.
ಇಂತಹ ಸಂದರ್ಭದಲ್ಲಿ ತನ್ನ ಅಣ್ಣ ತನ್ನನ್ನು ಮಾತ್ರ ಹೆಚ್ಚು ಪ್ರೀತಿಸಬೇಕೆಂಬ ಹಂಬಲದಲ್ಲಿ ಕೆಲವೊಂದು ಮನೆಗಳಲ್ಲಿ ಅತ್ತಿಗೆ ಮೇಲೆ ಚಾಡಿ ಹೇಳಿ ಅಣ್ಣನ ಸಂಸಾರವನ್ನೇ ಹಾಳು ಮಾಡುವವರೂ ಇರುತ್ತಾರೆ. ಇಂತಹ ನಾದಿನಿಯರು ಈ ರೀತಿ ಮಾಡಲು ಮೊದಲನೆಯ ಕಾರಣ ಅವರಿಗಿರುವ ಪೊಸೆಸಿವ್ ನೆಸ್ ಮತ್ತು ಅಸುರಕ್ಷತೆಯ ಭಾವ. ಎಲ್ಲಿ ತನ್ನ ಅಣ್ಣನ ಬೆಂಬಲವಿಲ್ಲದೇ ತಾನು ಏಕಾಂಗಿಯಾಗುತ್ತೇನೋ ಎಂಬ ಭಯ.
ಇಂತಹ ಸಂದರ್ಭದಲ್ಲಿ ಇದಕ್ಕಿರುವ ಮೊದಲ ಪರಿಹಾರವೆಂದರೆ ಅಂತಹ ನಾದಿನಿಗೂ ಒಬ್ಬ ಜತೆಗಾರನನ್ನು ಹುಡುಕಿ ಕೊಡುವುದು. ಇದರಿಂದ ಆಕೆಯ ಗಮನ ಬೇರೆ ಕಡೆಗೆ ಸರಿಯುತ್ತದೆ. ಅಣ್ಣನ ಹೊರತಾಗಿಯೂ ತನ್ನನ್ನೇ ಪ್ರೀತಿಸಲು ಜೀವವೊಂದಿದೆ ಎಂದಾಗ ಅಣ್ಣನ ಮೇಲಿನ ಪೊಸೆಸಿವ್ ನೆಸ್ ತಾನಾಗಿಯೇ ಕಡಿಮೆಯಾಗುತ್ತದೆ. ಮತ್ತು ತನ್ನ ಅತ್ತಿಗೆಗೆ ಅಣ್ಣನ ಅಗತ್ಯವೆಷ್ಟಿದೆ ಎಂದು ಮನದಟ್ಟಾಗುತ್ತದೆ.