ಹೆಚ್ಚು ನೀರು ಕುಡಿದರೆ ಹೆಚ್ಚು ಆರೋಗ್ಯವೆಂಬುದು ನಿಜವಾದರೂ ದಿನಕ್ಕೆ ಇಂತಿಷ್ಟು ನೀರು ಕುಡಿಯಬೇಕು ಎಂಬುದು ವಿಜ್ಞಾನದಲ್ಲಿ ತಿಳಿಸಿರುವ ಸಲಹೆಯಾಗಿದೆ. ಸಾಮಾಜಿಕ ತಾಣಗಳಲ್ಲಿ, ಸೆಲೆಬ್ರಿಟಿಗಳ ಜಾಹೀರಾತುಗಳಲ್ಲಿ ಹೀಗೆ ನೀರಿನ ಸೇವನೆಯ ಕುರಿತು ಹೆಚ್ಚಿನ ಬೋಧನೆಗಳನ್ನು ನಾವು ಪಡೆಯುತ್ತಲೇ ಇರುತ್ತವೆ.
ದೇಹದ ಸ್ವಾಸ್ಥ್ಯಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಉತ್ತಮ ಎಂಬುದು ಸಲಹೆಯಾಗಿದ್ದರೂ ಈ ಸಾಕಷ್ಟು ಎಂಬುದು ಯಾವ ಅಂಶ ಆಧರಿಸಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಆರೋಗ್ಯವಾಗಿರಲು, ತ್ವಚೆಯ ಹೊಳಪು ಹೆಚ್ಚಿಸಲು, ಮಾನಸಿಕ ಆರೋಗ್ಯ ದುಪ್ಪಟ್ಟುಗೊಳಿಸಲು ಹೀಗೆ ನೀರು ಸೇವನೆಯಿಂದ ಉಂಟಾಗುವ ಪ್ರಯೋಜನಗಳನ್ನು ಪಟ್ಟಿಮಾಡುತ್ತಲೇ ಹೋಗಬಹುದು. ಒಟ್ಟಾರೆ ಹೈಡ್ರೇಟ್ ಆಗಿರುವುದರಿಂದ ರೋಗ ರುಜಿನಗಳು ಸಮೀಪ ಬರುವುದಿಲ್ಲ ಎಂಬ ಮಾತು ಇಲ್ಲಿ ಬಹುಮಟ್ಟಿಗೆ ಸಾರ್ಥಕ ಪಡೆದಿದೆ.
ಹೈಡ್ರೇಟ್ ಆಗಿರಿ ಎಂಬ ಪದದ ಅರ್ಥವನ್ನು ನಾವಿಲ್ಲಿ ತಿಳಿದುಕೊಳ್ಳಲು ಬಯಸಿದರೆ ದೇಹದಲ್ಲಿರುವ ದ್ರವಗಳ ನಷ್ಟವನ್ನು ನಿರ್ಜಲೀಕರಣ ಸೂಚಿಸುತ್ತದೆ ಎಂಬುದು ಮಿಚಿಗನ್ ವಿಶ್ವವಿದ್ಯಾಲಯದ ನೆಫ್ರಾಲಜಿಸ್ಟ್ ಮತ್ತು ಸಹಾಯಕ ವೈದ್ಯಕೀಯ ಪ್ರಾಧ್ಯಾಪಕ ಡಾ. ಜೋಯಲ್ ಟಾಪ್ ಅಭಿಪ್ರಾಯವಾಗಿದೆ. ಹೈಡ್ರೇಟ್ ಆಗಿರುವುದು ಎಂದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಎಂಬುದಲ್ಲ ಎಂದು ಬರ್ಮಿಂಗ್ಹ್ಯಾಮ್ನ ಅಲಬಾಮಾ ವಿಶ್ವವಿದ್ಯಾಲಯದ ಮೂತ್ರಪಿಂಡದ ಕಾರ್ಯ ಸಂಶೋಧಕ ಕೆಲ್ಲಿ ಅನ್ನೆ ಹಿಂಡ್ಮನ್ ತಿಳಿಸುತ್ತಾರೆ. ಹೆಚ್ಚು ನೀರು ಕುಡಿಯುವುದರಿಂದ ಜನರು ದೀರ್ಘಕಾಲ ಆರೋಗ್ಯವಂತರಾಗಿರುತ್ತಾರೆ ಎಂಬ ಮಾತಿನಲ್ಲಿ ಯಾವುದೇ ಹುರುಳಿಲ್ಲ ಎಂಬುದು ಕೆಲ್ಲಿ ಅಭಿಪ್ರಾಯವಾಗಿದೆ.
ವೈದ್ಯಕೀಯವಾಗಿ ಜಲಸಂಚಯನ (ಹೈಡ್ರೇಶನ್) ಅಳತೆ ಎಂಬುದು ದೇಹದಲ್ಲಿ ಸೋಡಿಯಂ ಹಾಗೂ ನೀರಿನಂತಹ ಎಲೆಕ್ಟ್ರೋಲೈಟ್ಗಳ ನಡುವಿನ ಸಮತೋಲನವಾಗಿದೆ. ಇದನ್ನು ಕಾಪಾಡಿಕೊಳ್ಳಲು ದಿನವಿಡೀ ನೀರು ಕುಡಿಯುತ್ತಿರುವುದೊಂದೇ ಪರಿಹಾರವಲ್ಲ ಎಂಬುದು ಜೋಯಲ್ ಸಲಹೆಯಾಗಿದೆ. ಹಾಗಾದರೆ ನೀರಿನ ಕುರಿತಾದ ಕೆಲವೊಂದು ಮಿಥ್ಯಾಂಶಗಳು ಜೊತೆಗೆ ಯಾವಾಗ ನೀರು ಕುಡಿಯಬೇಕು ಎಂಬುದನ್ನು ತಜ್ಞರ ಸಹೆಗಳ ಮೂಲಕ ತಿಳಿದುಕೊಳ್ಳೋಣ. ದಿನನಿತ್ಯ ಎಷ್ಟು ನೀರು ಕುಡಿಯಬೇಕು?
ಪ್ರತಿಯೊಬ್ಬರೂ ಆರೋಗ್ಯವಾಗಿರಲು ದಿನವೂ 8 ಲೋಟಗಳಷ್ಟು ನೀರು ಕುಡಿಯಬೇಕು ಎಂಬುದು ತಿಳಿದಿರುವ ವಿಚಾರವಾಗಿದೆ. ಆದರೆ ಇದು ಮಿಥ್ಯ ಎಂಬುದು ಡೆಟ್ರಾಯಿಟ್ನ ವೇಯ್ನ್ ಸ್ಟೇಟ್ ಯೂನಿವರ್ಸಿಟಿಯ ವ್ಯಾಯಾಮ ಮತ್ತು ಕ್ರೀಡಾ ವಿಜ್ಞಾನಿ ತಮಾರಾ ಹ್ಯೂ-ಬಟ್ಲರ್ ಹೇಳುತ್ತಾರೆ. ದೇಹದ ಗಾತ್ರ, ಹೊರಗಿನ ತಾಪಮಾನ, ನಿಮ್ಮ ಉಸಿರಾಟ ಕ್ರಿಯೆ ಹಾಗೂ ದೇಹದ ಬೆವರು ನಿಮ್ಮ ದೇಹಕ್ಕೆ ಬೇಕಾಗುವ ನೀರಿನ ಪ್ರಮಾಣವನ್ನು ನಿರ್ಧರಿಸುತ್ತದೆ ಎಂಬುದು ತಮಾರಾ ಹೇಳುವ ಸಲಹೆಯಾಗಿದೆ. ಹವಾನಿಯಂತ್ರಿತ ಕೊಠಡಿಯಲ್ಲಿರುವ ವ್ಯಕ್ತಿ ಸೇವಿಸುವ ನೀರಿಗಿಂತ 10 ಮೈಲು ದೂರ ಬಿಸಿಲಿನಲ್ಲಿ ನಡೆಯುವ ವ್ಯಕ್ತಿ ಸೇವಿಸುವ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ ಎಂಬುದು ತಮಾರಾ ಹೇಳುವ ಅಂಶವಾಗಿದೆ.
ಒಂದು ದಿನದಲ್ಲಿ ನಿಮಗೆ ಬೇಕಾಗುವ ನೀರಿನ ಪ್ರಮಾಣವು ನಿಮ್ಮ ಆರೋಗ್ಯವನ್ನು ಅವಲಂಬಿಸಿರುತ್ತದೆ. ಹೃದಯ ವೈಫಲ್ಯ ಅಥವಾ ಮೂತ್ರಪಿಂಡದ ಕಲ್ಲುಗಳನ್ನು ಹೊಂದಿರುವ ವ್ಯಕ್ತಿಯು ಸೇವಿಸುವ ನೀರಿನ ಪ್ರಮಾಣ ಮೂತ್ರವರ್ಧಕ ಔಷಧಿಗಳನ್ನು ತೆಗೆದುಕೊಳ್ಳುವವರಿಗಿಂತ ಹೆಚ್ಚಾಗಿರುತ್ತದೆ. ನೀವು ವಾಂತಿ ಅಥವಾ ಅತಿಸಾರದಿಂದ ಬಳುಲುತ್ತಿದ್ದರೆ ಸೇವಿಸುವ ನೀರಿನ ಪ್ರಮಾಣವನ್ನು ಬದಲಾಯಿಸಬೇಕಾಗುತ್ತದೆ. ಹೈಡ್ರೇಟ್ ಆಗಿರಲು ನೀರು ಕುಡಿಯುವುದು ಆವಶ್ಯಕವೇ?
ಪೌಷ್ಟಿಕಾಂಶದ ದೃಷ್ಟಿಯಿಂದ ಸೋಡಾ ಅಥವಾ ಸಕ್ಕರೆಯುಕ್ತ ಹಣ್ಣಿನ ರಸ ಸೇವಿಸುವುದಕ್ಕಿಂತ ನೀರು ಕುಡಿಯುವುದು ಒಳ್ಳೆಯದು ಎಂಬುದು ವೈಜ್ಞಾನಿಕ ಹೇಳಿಕೆಯಾಗಿದೆ. ಹೈಡ್ರೇಶನ್ ವಿಷಯಕ್ಕೆ ಬಂದಾಗ ಯಾವುದೇ ಪಾನೀಯವನ್ನು ನಿಮ್ಮ ದೇಹಕ್ಕೆ ನೀಡಬಹುದು ಎಂಬುದು ಹ್ಯೂ-ಬಟ್ಲರ್ ಅಭಿಪ್ರಾಯವಾಗಿದೆ.
ಕೆಫೀನ್ ಅಥವಾ ಆಲ್ಕೋಹಾಲ್ನೊಂದಿಗೆ ಪಾನೀಯಗಳನ್ನು ಸೇವಿಸುವುದು ನಿರ್ಜಲೀಕರಣಗೊಳಿಸುತ್ತದೆ ಎಂಬ ಅಭಿಪ್ರಾಯವಿದೆ. ಈ ಅಭಿಪ್ರಾಯ ನಿಜವಾಗಿದ್ದರೂ ಪರಿಣಾಮ ಅತಿ ಕಡಿಮೆ ಎಂಬುದು ಬಟ್ಲರ್ ಹೇಳಿರುವ ಅಂಶವಾಗಿದೆ. 2016ರಲ್ಲಿ ಯಾದೃಚ್ಛಿಕವಾಗಿ 72 ಪುರುಷರ ಮೇಲೆ ನಡೆಸಿದ ಒಂದು ಪ್ರಯೋಗದಿಂದ ತಿಳಿದುಬಂದ ಅಂಶವೇನೆಂದರೆ ನೀರು, ಕಾಫಿ ಅಥವಾ ಚಹಾ ಹೈಡ್ರೇಟಿಂಗ್ ಅಂಶಗಳನ್ನು ಒಳಗೊಂಡಿವೆ ಎಂದಾಗಿದೆ. ಎಲೆಕ್ಟ್ರೋಲೈಟ್ಗಳ ಕುರಿತು ಚಿಂತಿಸಬೇಕಾಗಿದೆಯೇ?
ಎಲೆಕ್ಟ್ರೋಲೈಟ್ಗಳಿರುವ ಪಾನೀಯಗಳನ್ನು ಆರೋಗ್ಯವಂತ ಜನರು ಸೇವಿಸಬೇಕು ಎಂಬ ನಿಯಮವಿಲ್ಲ ಎಂಬುದು ತಜ್ಞರಾದ ಹ್ಯೂ-ಬಟ್ಲರ್ ಅಭಿಪ್ರಾಯವಾಗಿದೆ. ಸೋಡಿಯಂ, ಪೊಟ್ಯಾಶಿಯಂ, ಕ್ಲೋರೈಡ್ ಮತ್ತು ಮೆಗ್ನೀಶಿಯಂನಂತಹ ವಿದ್ಯುದ್ವಿಚ್ಛೇದ್ಯಗಳು ದೇಹದ ದ್ರವಗಳಲ್ಲಿ ಇರುವ ಎಲೆಕ್ರಿಕಲಿ ಚಾರ್ಜ್ ಆಗಿರುವ ಖನಿಜಗಳಾಗಿವೆ ಮತ್ತು ನಿಮ್ಮ ದೇಹದಲ್ಲಿನ ನೀರನ್ನು ಸಮತೋಲನಗೊಳಿಸಲು ಮುಖ್ಯವಾಗಿದೆ. ನರಗಳು, ಸ್ನಾಯುಗಳು, ಮೆದುಳು ಮತ್ತು ಹೃದಯದ ಸರಿಯಾದ ಕಾರ್ಯನಿರ್ವಹಣೆಗೆ ಅವು ಅವಶ್ಯಕ. ಬಾಯಾರಿಕೆಯಾಗದಿದ್ದರೂ ನೀರು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ? ಈ ಮಾತು ಸರಿಯೇ?
ಹೌದು. ಏಕೆಂದರೆ ಮೂತ್ರಪಿಂಡದ ಕಲ್ಲುಗಳು ಪಾಲಿಸಿಸ್ಟಿಕ್ ಮೂತ್ರಪಿಂಡದ ಕಾಯಿಲೆ ಹೊಂದಿರುವವರು ಬಾಯಾರಿಕೆಯನ್ನು ತಣಿಸುವ ನೀರಿನ ಪ್ರಮಾಣಕ್ಕಿಂತ ಹೆಚ್ಚು ನೀರು ಸೇವಿಸುವುದರಿಂದ ಪ್ರಯೋಜನ ದೊರೆಯುತ್ತದೆ ಎಂದು ತಜ್ಞರಾದ ಟಾಪ್ ಹೇಳುತ್ತಾರೆ. ಆದರೆ ಪ್ರಮಾಣಕ್ಕಿಂತ ಹೆಚ್ಚು ನೀರು ಕುಡಿಯುವುದು ಅಸ್ವಸ್ಥತೆಯನ್ನುಂಟು ಮಾಡಬಹುದು ಎಂಬುದು ಹೈಂಡ್ಮನ್ ಎಚ್ಚರಿಕೆಯಾಗಿದೆ. ತಲೆನೋವು, ಇಲ್ಲದಿದ್ದರೆ ಕೆಟ್ಟ ಯೋಚನೆಗಳಿಂದ ಬಳಲುವುದು ಆಗಾಗ್ಗೆ ನೀರು ಕುಡಿಯಬೇಕೆಂಬ ಅನಿಸಿಕೆ, ನಿರ್ಜಲೀಕರಣದಿಂದ ಬಳಲುತ್ತಿದ್ದೇನೆ ಎಂಬ ಭಯ ಮೂಡುವುದು ಹೀಗೆ ಬೇರೆ ಬೇರೆ ಕಾರಣಗಳಿಂದ ಹೆಚ್ಚು ಹೆಚ್ಚು ನೀರು ಸೇವಿಸುವುದು ಅನೇಕ ಅನಾರೋಗ್ಯಗಳಿಗೆ ಎಡೆ ಮಾಡಿಕೊಡುತ್ತದೆ. ದೇಹಕ್ಕೆ ಬೇಕಾಗುವಷ್ಟು ಪ್ರಮಾಣದಲ್ಲಿ ನೀರು ಸೇವಿಸುತ್ತಿದ್ದೇನೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?
ನಿಮ್ಮ ದೇಹವೇ ಈ ಕುರಿತು ನಿಮಗೆ ಸೂಚನೆ ನೀಡುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ದೇಹ ಸುಸ್ಥಿತಿಯಲ್ಲಿರುತ್ತದೆ ಹಾಗೂ ಅನಾರೋಗ್ಯ ತಪ್ಪಿಸಲು ಸಾಕಷ್ಟು ನೀರು ಸೇವಿಸುವುದು ಒಳ್ಳೆಯದು ಎಂಬುದು ಕೆಟ್ಟ ಆಲೋಚನೆ ಎಂದು ತಜ್ಞರು ತಿಳಿಸುತ್ತಾರೆ. ನಿಮ್ಮ ದೇಹವು ನಿರ್ಜಲೀಕರಣವಾಗುತ್ತಿದೆ, ಇಲ್ಲದಿದ್ದರೆ ಸೇವಿಸುವ ನೀರು ಕಡಿಮೆಯಾಯಿತು ಎಂಬ ಯೋಚನೆಯನ್ನು ಬಿಟ್ಟುಬಿಡಿ ಎಂದು ತಜ್ಞರು ತಿಳಿಸುತ್ತಾರೆ. ನಿಮಗೆ ಬಾಯಾರಿಕೆಯಾದಾಗ ನೀರು ಸೇವಿಸಿ ಈ ವಿಧಾನ ತುಂಬಾ ಸರಳವಾದುದು ಹಾಗೂ ಇದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.