ಬೆಲ್ಗ್ರೇಡ್: ಸರ್ಬಿಯಾದ ರಾಜಧಾನಿ ಬೆಲ್ಗ್ರೇಡ್ ಬಳಿಯ ಪಟ್ಟಣದಲ್ಲಿ ಗುರುವಾರ ತಡರಾತ್ರಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ.
10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಸರ್ಬಿಯಾದಲ್ಲಿ ಇದು ಕೇವಲ ಎರಡೇ ದಿನದೊಳಗೆ ನಡೆದಿರುವ 2ನೇ ಗುಂಡಿನ ದಾಳಿಯಾಗಿದ್ದು, ಜನತೆಯಲ್ಲಿ ಭೀತಿ ಹೆಚ್ಚಿಸಿದೆ.
ರಾಜಧಾನಿ ಬೆಲ್ಗ್ರೇಡ್ನಿಂದ ದಕ್ಷಿಣಕ್ಕೆ ಸುಮಾರು 50 ಕಿ.ಮೀ ದೂರದಲ್ಲಿರುವ ಮ್ಲಾಡೆನೊವಾಕ್ ಬಳಿ 21 ವರ್ಷದ ಶಂಕಿತ ಯುವಕನೊಬ್ಬ ಜನರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ವರದಿಗಳು ತಿಳಿಸಿವೆ. ದಾಳಿಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಕೇವಲ 2 ದಿನಗಳ ಹಿಂದೆ ಬುಧವಾರ ಬೆಲ್ಗ್ರೇಡ್ನ ವ್ಲಾಡಿಸ್ಲಾವ್ ರಿಬ್ನಿಕಸ್ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿಯ 13 ವರ್ಷದ ಬಾಲಕನೊಬ್ಬ ತನ್ನ ತಂದೆಯ ಬಂದೂಕನ್ನು ಬಳಸಿ ಗುಂಡಿನ ದಾಳಿ ನಡೆದಿದ್ದ.
ಘಟನೆಯಲ್ಲಿ 8 ಮಕ್ಕಳು ಹಾಗೂ ಒಬ್ಬ ಶಾಲೆಯ ಸಿಬ್ಬಂದಿ ಸಾವನ್ನಪ್ಪಿದ್ದರು. ಈ ಗುಂಡಿನ ದಾಳಿಯ ಬಳಿಕ ದೇಶಾದ್ಯಂತ ಭೀತಿ ಹೆಚ್ಚಾಗಿದ್ದು, ಅಧಿಕಾರಿಗಳು ಬಂದೂಕು ನಿಯಂತ್ರಣಕ್ಕೆ ಕರೆಗಳನ್ನು ನೀಡಿದ್ದಾರೆ.