ವಾಷಿಂಗ್ಟನ್ : ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಒಂದಾದಮೇಲೊಂದರಂತೆ ವರದಿಯಾಗುತ್ತಲೇ ಇದೆ. ಸೋಮವಾರ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿ ಇಡೀ ರಾಷ್ಟ್ರವನ್ನು ಭಯಭೀತಗೊಳಿಸಿದೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು 6 ಜನರು ಸಾವನ್ನಪ್ಪಿದ್ದಾರೆ.
ಅಮೆರಿಕದ ನ್ಯಾಶ್ವಿಲ್ಲೆಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಒಟ್ಟು 6 ಜನರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಇದು 2023ರಲ್ಲಿ ಅಮೆರಿಕದ ಶಾಲೆಗಳಲ್ಲಿ ನಡೆದಿರುವ 13ನೇ ಗುಂಡಿನ ದಾಳಿಯಾಗಿದೆ. ಮಾತ್ರವಲ್ಲದೇ ಅತ್ಯಂತ ಭಯಾನಕ ಎನಿಸಿಕೊಂಡಿದೆ.
ಶೂಟರ್ ಅನ್ನು ಆಡ್ರೆ ಹೇಲ್ (28) ಎಂದು ಗುರುತಿಸಲಾಗಿದೆ. ಆಕೆ ನ್ಯಾಶ್ವಿಲ್ಲೆಯಲ್ಲಿರುವ ಕವೆನೆಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಳು ಎನ್ನಲಾಗಿದೆ. ಆಕೆ ಶಾಲೆಯಲ್ಲಿ 3 ಮಕ್ಕಳ ಮೇಲೆ ದಾಳಿ ಮಾಡಿ ಕೊಂದಿದ್ದಾಳೆ. ಮಾತ್ರವಲ್ಲದೇ ಇಡೀ ದುಷ್ಕೃತ್ಯವನ್ನು ಆಕೆ ಮೊದಲೇ ಯೋಜಿಸಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಲೇ ಸ್ಥಳಕ್ಕೆ ಬಂದ ಪೊಲೀಸರು ಸ್ಥಿತಿಯನ್ನು ನಿಯಂತ್ರಿಸಲು ಹೇಲ್ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಆಕೆಯೂ ಸಾವನ್ನಪ್ಪಿದ್ದಾಳೆ.
ನ್ಯಾಶ್ವಿಲ್ಲೆ ಪ್ರಾಥಮಿಕ ಶಾಲೆಯಲ್ಲಿ ಗುಂಡಿನ ದಾಳಿ ನಡೆಸುವುದು ಆರೋಪಿಯ ಒಂದೇ ಗುರಿಯಾಗಿರಲಿಲ್ಲ. ಬದಲಿಗೆ ಆಕೆ ಇನ್ನೂ ಅನೇಕ ಶಾಲೆಗಳನ್ನು ಗುರಿಯಾಗಿಸಿಕೊಂಡಿದ್ದಳು. ಆಕೆ ದಿ ಕವೆನಂಟ್ ಶಾಲೆಯ ಮುಖ್ಯಸ್ಥನನ್ನೂ ಗುಂಡಿಕ್ಕಿ ಕೊಂದಿದ್ದು, ಆಕೆಯ ದಾಳಿಯ ಮುಖ್ಯ ಗುರಿ ಇದೇ ಆಗಿತ್ತು ಎಂಬುದು ತಿಳಿದುಬಂದಿದೆ.