ಭಾರತ ನಂತ್ರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಇರಾನ್

ಸೋಮವಾರ, 8 ಮೇ 2017 (20:03 IST)
ಭಾರತೀಯ ಸೇನೆ ನಿಯಂತ್ರಣ ರೇಖೆಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಶಿಬಿರಗಳನ್ನು ನಿರ್ಮೂಲನೆ ಮಾಡಿದ ಕೆಲವು ತಿಂಗಳುಗಳ ನಂತರ, ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ 'ಸುರಕ್ಷಿತ ಸ್ವರ್ಗ'ಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಸಿದೆ.
 
ಇರಾನಿನ ಸಶಸ್ತ್ರ ಪಡೆಗಳ ಮುಖ್ಯಸ್ಥ ಸೋಮವಾರದಂದು ಪಾಕಿಸ್ತಾನಕ್ಕೆ ನೇರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. 
 
ಇರಾನ್‌ ಗಡಿಯಲ್ಲಿ ದಾಳಿ ನಡೆಸುತ್ತಿರುವ ಪಾಕ್ ಉಗ್ರಗಾಮಿಗಳನ್ನು ಸರ್ಕಾರ ನಿಯಂತ್ರಿಸದಿದ್ದರೆ ಪಾಕಿಸ್ತಾನದೊಳಗಿರುವ ಉಗ್ರರ ತಾಣಗಳ ಮೇಲೆ ದಾಳಿ ಮಾಡಲು ಹಿಂಜರಿಯುವುದಿಲ್ಲ ಎಂದು ಇರಾನ್ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಬಾಖೆರಿ ಗುಡುಗಿದ್ದಾರೆ.  
 
ಈ ಸನ್ನಿವೇಶದ ಮುಂದುವರಿಯುವುದನ್ನು ನಾವು ಸಹಿಸಲು ಸಾಧ್ಯವಿಲ್ಲ ಎಂದು ಮೇಜರ್ ಜನರಲ್ ಅವರು ರಾಜ್ಯ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 
 
ಪಾಕಿಸ್ತಾನದ ಅಧಿಕಾರಿಗಳು ಗಡಿಗಳನ್ನು ನಿಯಂತ್ರಿಸಿ, ಭಯೋತ್ಪಾದಕರನ್ನು ಬಂಧಿಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುತ್ತಾರೆ ಎನ್ನುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. 
 
ಕಳೆದ ತಿಂಗಳು ಪಾಕಿಸ್ತಾನ ಮೂಲದ ಉಗ್ರಗಾಮಿಗಳು ಹತ್ತು ಮಂದಿ ಇರಾನ್ ಬಾರ್ಡರ್ ಗಾರ್ಡ್‌ಗಳನ್ನು ಹತ್ಯೆ ಮಾಡಿದ ನಂತರ ಸೇನಾ ಮುಖ್ಯಸ್ಥರ ಎಚ್ಚರಿಕೆ ಹೊರಬಿದ್ದಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ