ಬೆಂಗಳೂರು: 2029 ರಲ್ಲಿ ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವಲ್ಲ? ಆಗ ಬಿಜೆಪಿಯವರನ್ನು ಹುಡುಕಿ ಹುಡುಕಿ ತಿಹಾರ್ ಜೈಲಿಗೆ ಹಾಕ್ತೀವಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮೇಲೆ ಇಡಿ ರೇಡ್ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸುಬ್ಬಾ ರೆಡ್ಡಿ ಸಾಹೇಬ್ರ ಮೇಲೆ ಇಡಿ ದಾಳಿ ಮಾಡಿದ್ದಾರೆ. ಸುಬ್ಬಾ ರೆಡ್ಡಿ ಸಾಹೇಬ್ರು ಕಷ್ಟಪಟ್ಟು ಮೇಲೆ ಬಂದವರು. ಪಕ್ಷ ಕಟ್ಟಿ ಮೇಲೆ ಬಂದವರು. ಅಂತಹವರ ಮೆಲೆ ಇಂದು ಇಡಿ ರೇಡ್ ಮಾಡಿದ್ದಾರೆ. ಇಡಿಯವರಿಗೆ ಯಾಕೋ ಕಾಂಗ್ರೆಸ್ ಕಂಡರೆ ಪ್ರೀತಿ ಹೆಚ್ಚು ಅನಿಸುತ್ತೆ.
ನಾನು ಬಿಜೆಪಿಯವರನ್ನು ಕೇಳ್ತೀನಿ, ಅಮಿತ್ ಶಾ ಮಗ ಜಯ್ ಶಾ ಎಂದು ಒಬ್ಬ ಮಗ ಇದ್ದಾರೆ. ಅವರ ಕಂಪನಿ ವ್ಯವಹಾರಗಳೆಲ್ಲಾ ಕ್ಲೀನ್ ಆಗಿದ್ಯಾ? ಅದು ಐಟಿ-ಇಡಿಯವರಿಗೆ ಕಾಣೋದೇ ಇಲ್ಲ. ನಿತಿನ್ ಗಡ್ಕರಿಯವರಿಗೆ 17 ಶುಗರ್ ಫ್ಯಾಕ್ಟರಿ ಇದೆ. ಅದು ಐಟಿ-ಇಡಿಯವರಿಗೆ ಕಾಣಲ್ಲ.
ನಾನು ಕೇಂದ್ರದಲ್ಲಿರುವ ಬಿಜೆಪಿಯವರಿಗೆ ಹೇಳಲು ಇಷ್ಟಪಡುತ್ತೇವೆ. ನೀವು ಎಷ್ಟು ಟಾರ್ಗೆಟ್ ಮಾಡಿದ್ರೂ ಹೆದರೋ ಪ್ರಶ್ನೆಯೇ ಇಲ್ಲ. ಬರೀ ಕಾಂಗ್ರೆಸ್ ನ್ನೇ ಟಾರ್ಗೆಟ್ ಮಾಡ್ತಿದ್ದರೆ ರಾಜಕೀಯ ಎಲ್ಲಿಗೆ ಹೋಗುತ್ತದೆ?
ನಾವು 2029 ಕ್ಕೆ ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಆಗ ನಾವು ಬಿಜೆಪಿಯವರನ್ನು ಹುಡುಕಿ ಹುಡುಕಿ ತಿಹಾರ್ ಜೈಲಿಗೆ ಹಾಕ್ತೇವೆ. ಅವರು ಕಲ್ಲು ಹಾಕಿದ್ರೆ ನಾವು ಫ್ಲವರ್ ಹಾಕ್ತೀವಾ? ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಇದಕ್ಕೆ ಮಾಧ್ಯಮದವರು ಹಾಗಿದ್ದರೆ ನೀವು ಈ ಹಿಂದೆ ಕಲ್ಲು ಹಾಕಿದ್ರಾ? ಅದಕ್ಕೇ ಬಿಜೆಪಿಯವರೂ ಈಗ ಕಲ್ಲು ಹಾಕ್ತಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು ಹಂಗೇನೂ ಇಲ್ಲ, ನಾವು ಯಾರನ್ನೂ ಟಾರ್ಗೆಟ್ ಮಾಡಿರಲಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.