Operation Sindoor ಮೂಲಕ ಹಳೆಯ ಸೇಡು ತೀರಿಸಿಕೊಂಡ ಅಜಿತ್ ದೋವಲ್

Krishnaveni K

ಗುರುವಾರ, 8 ಮೇ 2025 (15:19 IST)
Photo Credit: X
ಲಾಹೋರ್: 1999 ರಲ್ಲಿ ಏರ್ ಇಂಡಿಯಾ ವಿಮಾನ ಅಪಹರಿಸಿ ಉಗ್ರ ಮಸೂದ್ ಅಜರ್ ಬಿಡುಗಡೆಗೆ ಕಾರಣವಾಗಿದ್ದ ಉಗ್ರ ಅಬ್ದುಲ್ ರೌಫ್ ಮಸೂದ್ ಇದೀಗ ಆಪರೇಷನ್ ಸಿಂಧೂರ್ ನಲ್ಲಿ ಫಿನಿಶ್ ಆಗಿದ್ದಾನೆ ಎಂಬ ಸುದ್ದಿ ಬಂದಿದೆ. ಆ ಮೂಲಕ ಹಳೆಯ ಸೇಡಿಗೆ ಅಜಿತ್ ದೋವಲ್ ಸೇಡು ತೀರಿಸಿಕೊಂಡಂತಾಗಿದೆ.

1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಏರ್ ಇಂಡಿಯಾ ವಿಮಾನ ಅಪಹರಣವಾಗಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿಸಿದ್ದ ಉಗ್ರರು ಭಾರತದ ವಶದಲ್ಲಿದ್ದ ಪ್ರಮುಖ ಉಗ್ರ ಮಸೂದ್ ಅಜರ್ ಬಿಡುಗಡೆಗೆ ಬೇಡಿಕೆಯಿಟ್ಟಿದ್ದರು. ಆಗ ಹಾಲಿ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದರು. ಪ್ರಯಾಣಿಕರ ಬದಲಿಗೆ ಉಗ್ರನನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಅಜಿತ್ ದೋವಲ್ ಅಂದು ಮೃದು ಧೋರಣೆ ತಳೆದರು ಎಂಬ ಅಪವಾದ ಅವರ ಮೇಲಿತ್ತು. ಇಂದು ಅದೇ ಅಜಿತ್ ದೋವಲ್ ನೇತೃತ್ವದಲ್ಲೇ ಅದೇ ಉಗ್ರನನ್ನು ಭಾರತೀಯ ಸೇನೆ ಫಿನಿಶ್ ಮಾಡಿ ಸೇಡು ತೀರಿಸಿಕೊಂಡಂತಾಗಿದೆ.

Photo Credit: X
ಈ ವಿಮಾನ ಅಪಹರಣದ ಪ್ರಮುಖ ರೂವಾರಿ ಅಬ್ದುಲ್ ರೌಫ್ ಮಸೂದ್. ಈತ ಜೈಶ್ ಎ ಮೊಹಮ್ಮದ್ ಸಂಘಟನೆಯ ಪ್ರಮುಖ ನಾಯಕ. ನಿನ್ನೆ ತಡರಾತ್ರಿ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ್ ನಲ್ಲಿ ಈತನೂ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಈತ ಮಸೂದ್ ಅಜರ್ ನ ಸಹೋದರನೂ ಹೌದು. ನಿನ್ನೆಯ ಭಾರತೀಯ ಸೇನೆಯ ದಾಳಿಯಲ್ಲಿ ಮಸೂದ್ ಅಜರ್ ನ ಕುಟುಂಬ ಸದಸ್ಯರೆಲ್ಲರೂ ಸಾವನ್ನಪ್ಪಿದ್ದರು. ಈ ಪೈಕಿ ಅಬ್ದುಲ್ ರೌಫ್ ಕೂಡಾ ಸೇರ್ಪಡೆಯಾಗಿದ್ದಾನೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ