ಢಾಕಾ: ಬಾಂಗ್ಲಾದೇಶದಲ್ಲಿ ಉಲ್ಭಣಿಸಿರುವ ಹಿಂಸಾಚಾರದ ಬೆನ್ನಲ್ಲೇ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ಸಲ್ಲಿಸಿದ್ದು, ದೇಶವನ್ನು ತೊರೆದಿದ್ದಾರೆ ಎಂಬ ಮಾಹಿತಿಯಿದೆ.
ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಅಸಹಕಾರ ಚಳವಳಿಯ ಮೊದಲ ದಿನವಾದ ಭಾನುವಾರ, ಪ್ರತಿಭಟನಕಾರರು ಹಾಗೂ ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆಯಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ಹಿಂಸಾಚಾರ ತೀವ್ರ ಸ್ವರೂಪ ಪಡೆಯುತ್ತಿದ್ದ ಹಾಗೇ ಪ್ರಧಾನಿ ಶೇಖ್ ಅವರು ರಾಜೀನಾಮೆ ಸಲ್ಲಿಸಿ, ಇದೀಗ ತಮ್ಮ ಸಹೋದರಿಯೊಂದಿಗೆ ಢಾಕಾ ತೊರೆದಿದ್ದಾರೆ.
ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ನುಗ್ಗಿದ್ದಾರೆ. ಸೇನಾ ಮುಖ್ಯಸ್ಥರು ಶೀಘ್ರದಲ್ಲೇ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ.
ಅನಿರ್ದಿಷ್ಟ ಅವಧಿಗೆ ದೇಶದಾದ್ಯಂತ ಕರ್ಫ್ಯೂ ವಿಧಿಸಲು ಗೃಹ ಸಚಿವಾಲಯ ತೀರ್ಮಾನಿಸಿತ್ತು. ಫೇಸ್‌ಬುಕ್, ಮೆಸೆಂಜರ್, ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಂ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿತ್ತು. 4ಜಿ ಮೊಬೈಲ್ ಇಂಟರ್ನೆಟ್ ಸೇವೆಗಳ ಸ್ಥಗಿತಕ್ಕೂ ಆದೇಶಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.