ಮಾಲ್ ಗಳಿಗೆ ಹೊಸ ನಿಯಮ: ಇನ್ಮುಂದೆ ಹೀಗೆ ಮಾಡಿದ್ರೆ ಲೈಸೆನ್ಸ್ ರದ್ದು

Krishnaveni K

ಶುಕ್ರವಾರ, 26 ಜುಲೈ 2024 (11:55 IST)
Photo Credit: X
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಜಿಟಿ ಮಾಲ್ ನಲ್ಲಿ ರೈತನಿಗೆ ಅವಮಾನ ಮಾಡಿದ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಮಾಲ್ ಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಮಾಲ್ ಗಳು ಈ ಕೆಲವೊಂದು ತಪ್ಪು ಮಾಡಿದರೆ ಲೈಸೆನ್ಸ್ ರದ್ದಾಗಬಹುದಾಗಿದೆ.

ಮೊನ್ನೆಯಷ್ಟೇ ಜಿಟಿ ಮಾಲ್ ನಲ್ಲಿ ರೈತ ಫಕೀರಪ್ಪ ಎಂಬವರು ಪಂಚೆ ಉಟ್ಟುಕೊಂಡು ಬಂದ ಕಾರಣಕ್ಕೆ ಒಳಗೆ ಬಿಡದೇ ಅವಮಾನಿಸಲಾಗಿತ್ತು. ಈ ಘಟನೆ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತ್ತು. ಇದಾದ ಬಳಿಕ ನಗರಾಭಿವೃದ್ಧಿ ಇಲಾಖೆ ಮಾಲ್ ಗಳ ವಿರುದ್ಧ ಕಠಿಣ ನಿಯಮಾವಳಿ ರೂಪಿಸಲು ಮುಂದಾಗಿತ್ತು.

ಬಿಬಿಎಂಪಿ ಈಗ ಬೆಂಗಳೂರಿನ ಎಲ್ಲಾ ಮಾಲ್ ಗಳಿಗೆ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಅದರಲ್ಲೂ ವಿಶೇಷವಾಗಿ ವಸ್ತ್ರಸಂಹಿತೆ ವಿಚಾರವಾಗಿ ಅವಮಾನಿಸುವ ಮಾಲ್ ಗಳಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇನ್ನು ಮುಂದೆ ಮಾಲ್ ಗಳು ಡ್ರೆಸ್ ಕೋಡ್ ಬಗ್ಗೆ ಇಲ್ಲದ ನಿಯಮಗಳನ್ನು ಹೇರಿದರೆ ಅಂತಹ ಮಾಲ್ ಗಳ ಲೈಸೆನ್ಸ್ ರದ್ದುಗೊಳಿಸಲು ಬಿಬಿಎಂಪಿ ಮುಂದಾಗಿದೆ.

ಎಲ್ಲಾ ರೀತಿಯ, ವರ್ಗದ ಜನರ ಪ್ರವೇಶಕ್ಕೆ ಮಾಲ್ ಗಳು ಅವಕಾಶ ಕೊಡಬೇಕು. ಕಾಲ ಕಾಲಕ್ಕೆ ತೆರಿಗೆ ಪಾವತಿ ಮಾಡಬೇಕು. ಯಾವುದೇ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳಬಾರದು. ಈ ನಿಯಮಗಳನ್ನು ಮೀರಿದರೆ ಮಾಲ್ ಪರವಾನಗಿ ರದ್ದುಗೊಳಿಸಲಾಗುವುದು ಎಂಬ ಆದೇಶವನ್ನು ಶೀಘ್ರದಲ್ಲೇ ಬಿಬಿಎಂಪಿ ಎಲ್ಲಾ ಮಾಲ್ ಗಳಿಗೆ ನೀಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ