ಲಂಡನ್ : ಚೀನಾದ ವೀಡಿಯೋ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ಬ್ರಿಟನ್ ಸಂಸತ್ತು ನಿಷೇಧಿಸಿದೆ. ಭದ್ರತಾ ಕಾಳಜಿಯ ಹಿನ್ನೆಲೆ ಬ್ರಿಟನ್ ಸಂಸತ್ತು ತನ್ನ ನೆಟ್ವರ್ಕ್ನಲ್ಲಿರುವ ಎಲ್ಲಾ ಸಾಧನಗಳಿಂದಲೂ ಟಿಕ್ಟಾಕ್ ಅನ್ನು ನಿರ್ಬಂಧಿಸಿದೆ.
ಈ ಹಿಂದೆಯೇ ಭಾರತ ಇಡೀ ದೇಶದಲ್ಲಿ ಟಿಕ್‌ಟಾಕ್ ಅನ್ನು ಬ್ಯಾನ್ ಮಾಡಿದೆ. ಇದೀಗ ಬ್ರಿಟನ್ ಸಂಸತ್ತು ಭದ್ರತಾ ಕಾರಣಕ್ಕೆ ಟಿಕ್ಟಾಕ್ ಅನ್ನು ನಿಷೇಧಿಸಿದೆ. ಹೌಸ್ ಆಫ್ ಕಾಮನ್ಸ್ ಹಾಗೂ ಲಾರ್ಡ್ಸ್ ಎರಡೂ ಆಯೋಗಗಳು ಟಿಕ್‌ಟಾಕ್ ಅನ್ನು ಎಲ್ಲಾ ಸಂಸದೀಯ ಸಾಧನಗಳು ಹಾಗೂ ಸಂಸದೀಯ ನೆಟ್ವರ್ಕ್ಗಳಿಂದ ನಿರ್ಬಂಧಿಸಲು ನಿರ್ಧರಿಸಿವೆ ಎಂದು ಸಂಸತ್ತಿನ ವಕ್ತಾರರು ತಿಳಿಸಿದ್ದಾರೆ.
ಬ್ರಿಟನ್ ಕಳೆದ ವಾರ ಸರ್ಕಾರಿ ಫೋನ್ಗಳಲ್ಲಿ ಚೀನಾದ ಒಡೆತನದ ವೀಡಿಯೊ ಅಪ್ಲಿಕೇಶನ್ ಅನ್ನು ನಿಷೇಧಿಸಿತ್ತು. ಸೈಬರ್ ಭದ್ರತೆಯು ಸಂಸತ್ತಿನ ಪ್ರಮುಖ ಆದ್ಯತೆಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ. ಅಮೆರಿಕ, ಕೆನಡಾ, ಬೆಲ್ಜಿಯಂ ಹಾಗೂ ಯುರೋಪಿಯನ್ ಕಮಿಷನ್ ಈಗಾಗಲೇ ಸರ್ಕಾರಿ ಸಾಧನಗಳಿಂದ ಈ ಅಪ್ಲಿಕೇಶನ್ ಅನ್ನು ನಿಷೇಧಿಸಿವೆ.