ಭಾರತದ ಗಡಿಗಳಲ್ಲಿ ಶಾಶ್ವತ ಶಿಬಿರ ನಿರ್ಮಿಸುತ್ತಿರುವ ಚೀನಾ!

ಶುಕ್ರವಾರ, 16 ಜುಲೈ 2021 (08:51 IST)
ನವದೆಹಲಿ(ಜು.16): ಪೂರ್ವ ಲಡಾಖ್ ಗಡಿಯಲ್ಲಿ ಚೀನಾ ಸೇನೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಾಕೀತು ಮಾಡಿದ ಮರುದಿನವೇ, ಪೂರ್ವ ಲಡಾಖ್ ಸೇರಿದಂತೆ ಇನ್ನಿತರ ಗಡಿ ಪ್ರದೇಶಗಳಲ್ಲಿ ಚೀನಾ ತನ್ನ ಸೈನ್ಯಕ್ಕಾಗಿ ಕಿಲೋಮೀಟರ್ಗಟ್ಟಲೇ ಪ್ರದೇಶದಲ್ಲಿ ಕಾಂಕ್ರೀಟ್ ಬಳಸಿ ಶಾಶ್ವತ ಕಟ್ಟಡ ನಿರ್ಮಾಣ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ.


* ಪೂರ್ವ ಲಡಾಖ್, ಅರುಣಾಚಲ, ನಾಕುಲಾ ಪಾಸ್ ಬಳಿ ನಿರ್ಮಾಣ
* ಭಾರತದ ಗಡಿಗಳಲ್ಲಿ ಶಾಶ್ವತ ಶಿಬಿರ ನಿರ್ಮಿಸುತ್ತಿರುವ ಚೀನಾ
* ವ್ಯತಿರಿಕ್ತ ಪರಿಸ್ಥಿತಿಯಲ್ಲಿ ತ್ವರಿತ ಸೇನೆ ರವಾನೆಗೆ ಚೀನಾ ಸೇನೆಯ ಸಿದ್ಧತೆ

ವ್ಯತಿರಿಕ್ತ ಪರಿಸ್ಥಿತಿ ವೇಳೆ ಸೇನೆಯನ್ನು ತ್ವರಿತವಾಗಿ ಗಡಿಗೆ ರವಾನಿಸಲು ನೆರವಾಗುವ ನಿಟ್ಟಿನಲ್ಲಿ ಚೀನಾ ದೇಶ ತನ್ನ ಸೈನ್ಯಕ್ಕಾಗಿ ಶಾಶ್ವತ ಶಿಬಿರಗಳನ್ನು ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ಚೀನಾದ ಗಡಿ ಹಂಚಿಕೊಳ್ಳುವ ಪೂರ್ವ ಲಡಾಖ್, ಅರುಣಾಚಲ ಪ್ರದೇಶ ಮತ್ತು ಉತ್ತರ ಸಿಕ್ಕಿಂನ ನಾಕುಲಾ ಪ್ರದೇಶಗಳಲ್ಲಿ ಕಿ. ಮೀಗಟ್ಟಲೇ ಕಾಂಕ್ರೀಟ್ ಕಟ್ಟಡಗಳನ್ನೊಳಗೊಂಡ ಶಿಬಿರಗಳನ್ನು ನಿರ್ಮಾಣ ಮಾಡಿರುವುದು ಕಂಡುಬಂದಿದೆ ಎಂದು ಭಾರತೀಯ ಸೇನೆ ಮೂಲಗಳು ತಿಳಿಸಿವೆ.
ಕಳೆದ ಕೆಲ ವರ್ಷಗಳಿಂದ ಚೀನಾವು ತನಗೆ ಸೇರಿದ ಗಡಿ ಪ್ರದೇಶಗಳಲ್ಲಿ ರಸ್ತೆ ಕಾಮಗಾರಿಗಳನ್ನು ಉನ್ನತೀಕರಿಸಿಕೊಂಡಿದೆ. ಇದೀಗ ಗಡಿಯ ಬಳಿಯೇ ಶಾಶ್ವತ ಸೇನಾ ಶಿಬಿರಗಳನ್ನು ನಿರ್ಮಿಸುತ್ತಿದೆ. ಇದು ಭಾರತ ಸೇರಿದಂತೆ ಸುತ್ತಮುತ್ತಲಿನ ಯಾವುದೇ ದೇಶಗಳ ಗಡಿಗೆ ಚೀನಾ ತನ್ನ ಸೇನೆಯನ್ನು ತ್ವರಿತವಾಗಿ ರವಾನಿಸಲು ನೆರವಾಗಲಿದೆ.
2017ರಲ್ಲಿ ಭಾರತ ಮತ್ತು ಚೀನಾ ಅರುಣಾಚಲ ಪ್ರದೇಶ ಸಮೀಪ ಡೋಕ್ಲಾಮ್ನಲ್ಲಿ 72 ದಿನಗಳ ಕಾಲ ಸಂಘರ್ಷದ ವಾತಾವರಣ ಎದುರಿಸಿದ್ದವು. ಇನ್ನು 2020ರಲ್ಲಿ ಪೂರ್ವ ಲಡಾಖ್ನಲ್ಲಿ ಕೂಡಾ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ