ಬೆಂಗಳೂರು: ರಸ್ತೆ ಸರಿ ಮಾಡಿ ಎಂದು ಕೇಳಿದರೆ ಉದ್ಯಮಿಗಳನ್ನೇ ಕಾಂಗ್ರೆಸ್ ಸರ್ಕಾರ ಬೆದರಿಸುತ್ತಿದೆ. ಪರಿಣಾಮ ಗೂಗಲ್ ಎಐ ಹಬ್ ಆಂಧ್ರದ ಪಾಲಾಗಿದೆ ಎಂದು ಬಿಜೆಪಿ ನಾಯಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿ, ಪ್ರವಾಹ, ಟ್ರಾಫಿಕ್ ದಟ್ಟಣೆಗಳಂತಹ ಗಂಭೀರ ವಾಸ್ತವಿಕ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿದ ಉದ್ದಿಮೆದಾರರಿಗೆ ಬೆದರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು.
ವಾಸ್ತವಿಕ ನೆಲೆಯಲ್ಲಿ ಧ್ವನಿ ಎತ್ತಿದವರನ್ನು ಬೆದರಿಸುವುದು ಪ್ರಜಾಪ್ರಭುತ್ವವೇ..? ಈಗಾಗಲೇ ಐಟಿ ಹಬ್ ಗುಂಡಿಗಳ ಹಬ್ ಆಗಿದೆ. ಉದ್ಯಮಿಗಳನ್ನು ಬೆದರಿಸಿ, ಇಲ್ಲಿಂದ ಓಡಿಸಿ ನಿರುದ್ಯೋಗವನ್ನು ಹೆಚ್ಚು ಮಾಡುವ ಗುರಿ ಹಾಕಿಕೊಂಡಿದ್ದೀರಾ..?
ನಿಮ್ಮ ದುರಾಡಳಿತಕ್ಕೆ ಈಗಾಗಲೇ 30,000 ಉದ್ಯೋಗ ಸೃಷ್ಟಿಸಿ 10,000 ಕೋಟಿ ಆದಾಯ ನೀಡಬಲ್ಲ ಗೂಗಲ್ ಎಐ ಹಬ್ ಆಂಧ್ರದ ಪಾಲಾಗಿದೆ. ಏಷ್ಯಾದಲ್ಲೇ ಗೂಗಲ್ ಸಂಸ್ಥೆಯ ಅತಿ ದೊಡ್ಡ ಹೂಡಿಕೆಯನ್ನು ನಮ್ಮ ರಾಜ್ಯ ಕಳೆದುಕೊಳ್ಳುವಂತೆ ಮಾಡಿದ್ದೀರಲ್ಲಾ, ನಿಮಗೆ ನಾಚಿಕೆಯಾಗುವುದಿಲ್ಲವೇ..?
ಮಾನ್ಯ ಐಟಿ ಮಂತ್ರಿಗಳೇ, ಪ್ರಿಯಾಂಕ್ ಖರ್ಗೆ ಅವರೆ, ನೀವು ಮಾಡಬೇಕಾದ ಕೆಲಸ ಬಹಳಷ್ಟಿದೆ, ಅದನ್ನು ಮಾಡುವುದು ಬಿಟ್ಟು ವಿಷ ಕಾರುತ್ತಾ ಕೂತರೆ ಬೆಂಗಳೂರು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ ನೋಡಿ. ಕೋಮು ಗಲಭೆಯನ್ನು ಹುಟ್ಟುಹಾಕುವ ಬದಲು ಉದ್ಯಮಗಳನ್ನು ಹುಟ್ಟಿ ಹಾಕುವ ಕೆಲಸ ಮಾಡಿ ಎಂದಿದ್ದಾರೆ.