ಕೊರೊನಾವೈರಸ್ ಭೀತಿ: ಚೀನಾದಿಂದ ಪಾಕ್ ವಿದ್ಯಾರ್ಥಿಗಳನ್ನು ಕರೆತರಲು ಭಾರತ ಸಹಾಯ?
ಶುಕ್ರವಾರ, 7 ಫೆಬ್ರವರಿ 2020 (11:32 IST)
ನವದೆಹಲಿ: ಚೀನಾದ ವುಹಾನ್ ನಲ್ಲಿ ಕೊರೋನಾವೈರಸ್ ಭೀತಿ ಹೆಚ್ಚಾಗಿದ್ದು, ಈ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಸುರಕ್ಷಿತವಾಗಿ ವಿಶೇಷ ವಿಮಾನಗಳ ಮೂಲಕ ಭಾರತ ವಿದೇಶಾಂಗ ಇಲಾಖೆ ಸ್ವದೇಶಕ್ಕೆ ಕರೆತಂದಿತ್ತು.
ಭಾರತ ಈ ರೀತಿ ತನ್ನ ನಾಗರಿಕರ ರಕ್ಷಣೆಗೆ ಧಾವಿಸಿರುವುದನ್ನು ನೋಡಿದ ಕೆಲವು ಪಾಕ್ ವಿದ್ಯಾರ್ಥಿಗಳು ತಮ್ಮ ದೇಶದ ಪ್ರಧಾನಿ ಇಮ್ರಾನ್ ಖಾನ್ ಗೆ ನಮ್ಮನ್ನೂ ಇದೇ ರೀತಿ ಕಾಪಾಡಿ ಎಂದು ಮೊರೆಯಿಟ್ಟಿದ್ದರು.
ಭಾರತವನ್ನು ನೋಡಿ ಕಲಿಯಿರಿ. ಆದರೆ ನಮ್ಮ ದೇಶದ ಸರ್ಕಾರ ನಮ್ಮ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ನಾಚಿಕೆಯಾಗಬೇಕು ನಿಮಗೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಪಾಕ್ ಸರ್ಕಾರಕ್ಕೆ ಛೀಮಾರಿ ಹಾಕಿದ್ದರು.
ಇದೀಗ ಭಾರತ ಪಾಕ್ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕಳುಹಿಸಲು ನೆರವಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆ ‘ಈ ಬಗ್ಗೆ ನಮಗೆ ಇದುವರೆಗೆ ಪಾಕಿಸ್ತಾನ ಸರ್ಕಾರದಿಂದ ಮನವಿ ಬಂದಿಲ್ಲ. ಒಂದು ವೇಳೆ ಇಮ್ರಾನ್ ಸರ್ಕಾರ ಸಹಾಯ ಕೋರಿದರೆ ಪರಿಶೀಲಿಸೋಣ’ ಎಂದಿದ್ದಾರೆ.