ಮಾಸ್ಕೋ : ಭಾರೀ ಸ್ಫೋಟ ಸಂಭವಿಸಿದ ಘಟನೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕನಸಿನ ಯುರೋಪಿನ ಉದ್ದದ ಕ್ರಿಮಿಯಾ ಸೇತುವೆಗೆ ಮತ್ತೆ ಹಾನಿಯಾಗಿದೆ. ಇದರಿಂದ ಕ್ರಿಮಿಯಾ-ರಷ್ಯಾ ಸಂಪರ್ಕ ಕಡಿತಗೊಂಡಿದೆ.
ಸೇತುವೆ ಮೇಲೆ ಸ್ಫೋಟಗಳು ಸಂಭವಿಸಿದ್ದು, ರಷ್ಯಾದ ಬೆಲ್ಗೊರೊಡ್ ಪ್ರದೇಶದ ದಂಪತಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹೆಣ್ಣುಮಗುವೊಂದು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇದರ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾ ಆರೋಪಿಸಿದೆ.
ರಷ್ಯಾದ ಯೋಧರಿಗೆ ಸಾಮಗ್ರಿಗಳನ್ನ ತಲುಪಿಸುವ ಪ್ರಮುಖ ಮಾರ್ಗವಾಗಿರುವ ಕ್ರಿಮಿಯಾ ಸೇತುವೆ ಮೇಲೆ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದಾಳಿ ನಡೆದಿತ್ತು. ಸೇತುವೆ ಮಧ್ಯಭಾಗ ಸಂಪೂರ್ಣ ಧ್ವಂಸಗೊಂಡಿತ್ತು. ಇದಕ್ಕೆ ಉಕ್ರೇನ್ ಸೇನೆ ಕಾರಣ ಎಂದು ರಷ್ಯಾ ರಕ್ಷಣಾ ವಲಯದ ಅಧಿಕಾರಿಗಳು ಆರೋಪಿಸಿದ್ದರು. ಹಲವು ತಿಂಗಳ ಬಳಿಕ ಸೇತುವೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಲಾಗಿತ್ತು. ಇದೀಗ ಮತ್ತೊಂದು ದಾಳಿ ನಡೆದಿದ್ದು, ದಂಪತಿಗಳಿಬ್ಬರು ಸಾವನ್ನಪ್ಪಿದ್ದಾರೆ.
ಬೆಳಗ್ಗಿನ ಜಾವ 3:04 ಗಂಟೆಯಿಂದ 3:20ರ ಸುಮಾರಿಗೆ ಸೇತುವೆ ಮೇಲೆ ದಾಳಿ ನಡೆದಿದ್ದು, ಕ್ರಿಮಿಯಾ-ರಷ್ಯಾ ಸಂಪರ್ಕ ಸ್ಥಗಿತಗೊಂಡಿದೆ. ದಾಳಿಯ ವೀಡಿಯೋಗಳನ್ನು ಪರಿಶೀಲಿಸಿದ್ದೇವೆ. ಅಲ್ಲಿ ದಂಪತಿಗಳಿಬ್ಬರು ಸಾವನ್ನಪ್ಪಿದ್ದು, ಒಂದು ಹೆಣ್ಣು ಮಗು ಗಾಯಗೊಂಡಿದೆ ಎಂದು ಬೆಲ್ಗೊರೊಡ್ನ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ತಿಳಿಸಿದ್ದಾರೆ.