ಜರುಸಲೇಂ: ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಪ್ರವಾಸದಲ್ಲಿ ಅಪರೂಪದ ಘಟನೆಯೊಂದು ಜಗತ್ತಿನ ಗಮನ ಸೆಳೆದಿದೆ. ಪ್ರಧಾನಿ ಮೋದಿಯವರನ್ನು ಭೇಟಿಯಾದ ಬಾಲಕ ಡೀಯರ್ ಮಿಸ್ಟರ್ ಮೋದಿ, ಐ ಲವ್ ಯೂ, ನಾನು ಮತ್ತೆ ಭಾರತಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾನೆ.
ಆತ ಬೇರಾರೂ ಅಲ್ಲ 2008ರಲ್ಲಿ ನಡೆದ 26/11 ರ ಮುಂಬೈ ಉಗ್ರರ ದಾಳಿಯಲ್ಲಿ ಬದುಕುಳಿದ ಇಸ್ರೇಲ್ ಸಂತ್ರಸ್ಥ ಬಾಲಕ ಮೊಶೆ. ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈ ದಾಳಿ ಸಂತ್ರಸ್ಥ ಬಾಲಕ ಮೋಶೆಯನ್ನು ಭೇಟಿ ಮಾಡಿದರು. ಮೋಶೆ ಪ್ರಧಾನಿಯವರಿಗೆ ಫೋಟೋವೊಂದನ್ನು ಗಿಫ್ಟ್ ನೀಡಿ ಡಿಯರ್ ಮಿಸ್ಟರ್ ಮೋದಿ ಐ ಲವ್ ಯು. ನಾನು ಮುಂಬೈಗೆ ಮತ್ತೆ ಬರುತ್ತೇನೆ ಎಂದು ಹೇಳಿದ್ದಾನೆ. ಈ ವೇಳೆ ಜೊತೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ತಮ್ಮ ಭಾರತ ಭೇಟಿ ವೇಳೆ ಮೋಶೆನನ್ನು ಕರೆದುಕೊಂಡು ಬರುವುದಾಗಿ ಹೇಳಿದ್ದಾರೆ.
ಮುಂಬೈ ಉಗ್ರರ ದಾಳಿ ಸಂದರ್ಭದಲ್ಲಿ ಮೊಶೆ ತನ್ನ ತಂದೆ ಯಾತಿಯನ್ನು ಕಳೆದುಕೊಂಡಿದ್ದ. ಆಗ ಮೊಶೆಗೆ 2 ವರ್ಷ. ಸಧ್ಯ ತನ್ನ ಅಜ್ಜ-ಅಜ್ಜಿಯರೊಂದಿಗೆ ವಾಸವಿರುವ ಮೊಶೆಗೆ ಈಗ 10 ವರ್ಷ. ಮೊಶೆ 18 ವರ್ಷ ತುಂಬಿದ ಮೇಲೆ ಮುಂಬೈನ ನಾರಿಮನ್ ಹೌಸ್ ಗೆ ಬರುತ್ತಾನಂತೆ. ಕೇವಲ ಯಹೂದಿಗಳಿಗಷ್ಟೇ ಅಲ್ಲ, ಎಲ್ಲಾ ಭಾರತೀಯರಿಗೆ ಸೇವೆ ಸಲ್ಲಿಸಲು ಬಯಸಿದ್ದೇನೆ. ಭಾರತ ಮತ್ತು ಇಸ್ರೇಲ್ ನಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುತ್ತೇನೆ ಎಂದು ಮೊಶೆ ತಿಳಿಸಿದ್ದಾನೆ.