ಸ್ಟಾಕ್‌ಹೋಮ್: ಬಹುನಿರೀಕ್ಷಿತ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿಯ ಶಾಂತಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನಿರಾಸೆಯಾಗಿದೆ.
ನೆಜುವೆಲಾದ ವಿಪಕ್ಷ ನಾಯಕಿ ಮಾರಿಯಾ ಕೊರಿನಾ ಮಚಾದೋ ಅವರಿಗೆ ಪ್ರಶಸ್ತಿ ಸಿಕ್ಕಿದೆ. ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಅವರ ಅವಿಶ್ರಾಂತ ಕೆಲಸ ಮತ್ತು ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸಲು ಹೋರಾಟ ನಡೆಸುತ್ತಿರುವ ಮಾರಿಯಾ ಕೊರಿನಾ ಮಚಾದೋ ಅವರಿಗೆ 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನಾರ್ವೇಜಿಯನ್ ನೊಬೆಲ್ ಸಮಿತಿ ನಿರ್ಧರಿಸಿದೆ.
ಭಾರತ-ಪಾಕಿಸ್ತಾನ, ಅರ್ಮೇನಿಯಾ-ಅಜರ್ಬೈಜಾನ್ ಮತ್ತು ಇಸ್ರೇಲ್-ಇರಾನ್ ನಡುವಿನ ವಿವಾದಗಳು ಸೇರಿದಂತೆ ವಿಶ್ವದಾದ್ಯಂತ ಎಂಟು ಸಂಘರ್ಷಗಳನ್ನು ನಿಲ್ಲಿಸಿದ್ದೇನೆ ಎಂದು ಪ್ರತಿಪಾದಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹನಾಗಿದ್ದೇನೆ ಎಂದು ಪ್ರಶಸ್ತಿ ಘೋಷಣೆಗೂ ಮುನ್ನವೇ ಘೋಷಿಸಿಕೊಂಡಿದ್ದರು.
ಇದಕ್ಕೆ ಪೂರಕವಾಗಿ ಶ್ವೇತಭವನವು ನೊಬೆಲ್ ಘೋಷಣೆಗೆ ಮುಂಚೆಯೇ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಟ್ರಂಪ್ ಅವರನ್ನು ಶಾಂತಿ ಅಧ್ಯಕ್ಷ ಎಂದು ಪೋಸ್ಟ್ ಅನ್ನು ಪ್ರಕಟಿಸಿತ್ತು. ಹೀಗಾಗಿ ಟ್ರಂಪ್ ಅವರು ಈ ಬಾರಿಯ ನೊಬೆಲ್ ಪ್ರಶಸ್ತಿಗೆ ಫೆವರಿಟ್ ಎನಿಸಿಕೊಂಡಿದ್ದರು. ಅವರ ಉಮೇದುವಾರಿಕೆಯನ್ನು ಹಲವಾರು ಅಂತಾರಾಷ್ಟ್ರೀಯ ನಾಯಕರ ನಾಮನಿರ್ದೇಶನಗಳು ಔಪಚಾರಿಕವಾಗಿ ಬೆಂಬಲಿಸಿದ್ದವು.