ನ್ಯೂಯಾರ್ಕ್: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸುವ ಸಂಬಂಧ ಕರಡು ಅಧಿಸೂಚನೆಯನ್ನು ಅಮೆರಿಕ ಹೊರಡಿಸಿದೆ. ಹೀಗಾಗಿ, ಅಮೆರಿಕದ ಮಾರುಕಟ್ಟೆ ಪ್ರವೇಶಿಸುವ ಭಾರತದ ಸರಕುಗಳ ಮೇಲಿನ ಒಟ್ಟು ಸುಂಕ ಈಗ ಶೇಕಡ 50 ಆಗಿದೆ.
ಈ ಮಧ್ಯೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಲ್ಕು ಬಾರಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಲು ಪ್ರಯತ್ನಿಸಿದ್ದರು. ಆದರೆ, ಮೋದಿ ಅವರು ಟ್ರಂಪ್ ಜೊತೆ ದೂರವಾಣಿಯಲ್ಲಿ ಮಾತನಾಡಲು ನಿರಾಕರಿಸಿದ್ದಾರೆ ಎಂದು ಜರ್ಮನ್ ಪತ್ರಿಕೆ ಫ್ರಾಂಕ್‌ಫರ್ಟರ್ ಆಲ್ಗೆಮೈನ್ ವರದಿ ಮಾಡಿದೆ.
ಭಾರತದ ಸರಕುಗಳ ಮೇಲಿನ ಹೊಸ ಸುಂಕ ವ್ಯವಸ್ಥೆ ಆಗಸ್ಟ್ 27ರ ಮಧ್ಯರಾತ್ರಿ 12.01ರ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ 9.31) ಬಳಿಕ ಜಾರಿಗೆ ಬರಲಿದೆ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯು ಸೋಮವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಜುಲೈ 20 ರಂದು ಅಮೆರಿಕ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ 25 ಸುಂಕವನ್ನು ವಿಧಿಸಿತ್ತು. ನಂತರ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಹೆಚ್ಚುವರಿ ಶೇ 25 ಸುಂಕವನ್ನು ಡೊನಾಲ್ಡ್ ಟ್ರಂಪ್ ಹಾಕಿದ್ದಾರೆ. ಸದ್ಯ ಬ್ರೆಜಿಲ್ ಹೊರತುಪಡಿಸಿ ಅತಿ ಹೆಚ್ಚು ಸುಂಕ ಭಾರತದ ಮೇಲೆ ವಿಧಿಸಿದ್ದಾರೆ.
ಟ್ರಂಪ್ ನಿರ್ಧಾರದಿಂದ ಅಮೆರಿಕ ಭಾರತದ ನಡುವೆ ಬಿಕ್ಕಟ್ಟು ಆರಭವಾಗಿದೆ. ಬಿಕ್ಕಟ್ಟು ಪರಿಹಾರಕ್ಕೆ ಕರೆ ಮಾಡಿ ಮೋದಿಯನ್ನು ಮಣಿಯುವಂತೆ ಮಾಡಲು ಟ್ರಂಪ್ ನಾಲ್ಕೈದು ಬಾರಿ ಕರೆ ಮಾಡಿದ್ದಾರೆ. ಆದರೆ ಮೋದಿ ಟ್ರಂಪ್ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಜರ್ಮನ್ ಪತ್ರಿಕೆ ಹೇಳಿದೆ.
ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದಕ್ಕೆ ಟ್ರಂಪ್ ಭಾರತದ ಆರ್ಥಿಕತೆಯನ್ನು ಡೆಡ್ ಎಕಾನಮಿ ವ್ಯಂಗ್ಯವಾಡಿದ್ದರು. ಈ ಹೇಳಿಕೆಗೆ ಪ್ರತಿಯಾಗಿ ಮೋದಿ, ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗುವತ್ತ ಸಾಗುತ್ತಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದರು.
ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವ ಜವಳಿ, ಸಿದ್ಧ ಉಡುಪು, ಮುತ್ತು/ಹರಳು, ಆಭರಣಗಳು, ಸೀಗಡಿ, ಚರ್ಮದ ಉತ್ಪನ್ನಗಳು, ಪಾದರಕ್ಷೆ, ಡೇರಿ ಉತ್ಪನ್ನಗಳು, ರಾಸಾಯನಿಕಗಳು ಹಾಗೂ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಯಂತ್ರೋಪಕರಣಗಳ ಮೇಲೆ ಹೆಚ್ಚಿನ ಸುಂಕದ ಹೊರೆ ಬೀಳಲಿದೆ.