ಅಮೆರಿಕಾ ಅಧ್ಯಕ್ಷರಾದ ಬೆನ್ನಲ್ಲೇ ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ಶಾಕ್: ಬದಲಾಗಲಿದೆ ಪೌರತ್ವ ನಿಯಮ

Krishnaveni K

ಗುರುವಾರ, 7 ನವೆಂಬರ್ 2024 (11:35 IST)
Photo Credit: X
ವಾಷಿಂಗ್ಟನ್: ಅಮೆರಿಕಾದ ನೂತನ ಅಧ್ಯಕ್ಷರಾದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರೂ ಸೇರಿದಂತೆ ಅಲ್ಲಿನ ಪೌರತ್ವ ಪಡೆದಿರುವ ವಿದೇಶೀ ದಂಪತಿಗಳಿಗೆ ಶಾಕ್ ಕೊಡಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಯಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ನಿನ್ನೆಯಷ್ಟೇ ಭಾರತೀಯ ಮೂಲದ ಕಮಲಾ ಹ್ಯಾರಿಸ್ ರನ್ನು ಸೋಲಿಸಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಅವರ ಪದಗ್ರಹಣಕ್ಕೆ ಮುನ್ನ ಅನಿವಾಸಿ ಭಾರತೀಯರಿಗೆ ಶಾಕ್ ಕಾದಿದೆ. ತಾವು ಅಧಿಕಾರಕ್ಕೇರಿದ ನಂತರ ಟ್ರಂಪ್ ಪೌರತ್ವ ನಿಯಮದಲ್ಲಿ ಬದಲಾವಣೆ ತರಲು ಹೊರಟಿದ್ದಾರೆ. ಇದರಿಂದ ನೂರಾರು ಭಾರತೀಯ ದಂಪತಿಗಳು ತೊಂದರೆಗೆ ಸಿಲುಕಲಿದ್ದಾರೆ.

ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸೇರಿದಂತೆ ವಿದೇಶೀ ಪ್ರಜೆಗಳ ಮಕ್ಕಳಿಗೆ ಅಟೋಮೇಟಿಕ್ ಸಿಟಿಜೆನ್ ಶಿಪ್ ನೀಡುವ ನಿಯಮಕ್ಕೆ ಕತ್ತರಿ ಹಾಕಲು ಟ್ರಂಪ್ ತೀರ್ಮಾನಿಸಿದ್ದಾರೆ. ಇದು ತಾವು ಅಧಿಕಾರಕ್ಕೇರಿದ ಮೊದಲ ದಿನವೇ ಜಾರಿಗೆ ತರಲು ಅವರು ಯೋಜನೆ ರೂಪಿಸಿದ್ದಾರಂತೆ.

ಈ ನಿಯಮದ ಅನ್ವಯ ಪೋಷಕರಲ್ಲಿ ಒಬ್ಬರು ಅಮೆರಿಕಾದ ಖಾಯಂ ನಿವಾಸಿಯಾಗಿರಬೇಕು ಅಥವಾ ತಮ್ಮ ಮಕ್ಕಳಿಗಾಗಿ ಕಾನೂನಾತ್ಮಕವಾಗಿ ಅಮೆರಿಕಾ ನಿವಾಸಿಯಾಗಿರಬೇಕು ಎಂದು ಹೊಸ ನಿಯಮದಲ್ಲಿ ತಿದ್ದುಪಡಿಯಾಗಲಿದೆ. ಟ್ರಂಪ್ ಜಾರಿಗೆ ತರಲು ಉದ್ದೇಶಿಸಿರುವ ನಿಯಮದ ಪ್ರಕಾರ ಅಮೆರಿಕಾದಲ್ಲಿ ಜನಿಸಿದ ಮಾತ್ರಕ್ಕೆ ಮಕ್ಕಳಿಗೆ ಅಟೋಮೇಟಿಕ್ ಆಗಿ ಅಲ್ಲಿನ ನಾಗರಿಕತ್ವ ಸಿಗದು.

ಭಾರತೀಯರಿಗೆ ಇದು ಹೇಗೆ ಪರಿಣಾಮ ಬೀರಲಿದೆ?
ಅಮೆರಿಕಾದಲ್ಲಿ ಪ್ರಸಕ್ತ 4.8 ಮಿಲಿಯನ್ ಭಾರತೀಯರಿದ್ದಾರೆ. ಈ ಪೈಕಿ ಶೇ.34 ರಷ್ಟು ಮಂದಿ ಅಮೆರಿಕಾದಲ್ಲೇ ಜನಿಸಿದವರಾಗಿದ್ದಾರೆ. ಒಂದು ವೇಳೆ ಟ್ರಂಪ್ ಹೊಸ ನಿಯಮ ಜಾರಿಗೆ ತಂದರೆ ಭಾರತೀಯರಿಗೆ ಸಂಕಷ್ಟ ಎದುರಾಗಲಿದೆ.  ಈ ನಿಯಮ ಜಾರಿಗೆ ಬಂದರೆ ಅಮೆರಿಕಾ ಖಾಯಂ ನಿವಾಸಿಯಾಗಿರದ ಅಥವಾ ಗ್ರೀನ್ ಕಾರ್ಡ್ ಇಲ್ಲದ ಭಾರತೀಯ ದಂಪತಿಗೆ ಜನಿಸಿದ ಮಕ್ಕಳು ಅಟೋಮೇಟಿಕ್ ಆಗಿ ಅಮೆರಿಕಾ ನಾಗರಿಕತ್ವ ಪಡೆಯಲು ಅನರ್ಹರಾಗಿರುತ್ತಾರೆ. ಹೀಗಾಗಿ ಟ್ರಂಪ್ ಜಾರಿಗೆ ತರಲು ಉದ್ದೇಶಿಸಿರುವ ಈ ನಿಯಮ ನೇರವಾಗಿ ಭಾರತೀಯರ ಮೇಲೆ ಪರಿಣಾಮ ಬೀರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ