ಬುಡಕಟ್ಟು ಜನರಿಗೆ ಕಳಪೆ ಆಹಾರ, ಏನಾದ್ರೂ ಆದ್ರೆ ಯಾರು ಹೊಣೆ: ಬಿವೈ ವಿಜಯೇಂದ್ರ

Krishnaveni K

ಸೋಮವಾರ, 27 ಅಕ್ಟೋಬರ್ 2025 (15:28 IST)
ಬೆಂಗಳೂರು: ಬುಡಕಟ್ಟು ಜನರಿಗೆ ರಾಜ್ಯ ಸರ್ಕಾರ ಪೂರೈಕೆ ಮಾಡುತ್ತಿರುವ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದ್ದು ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದು ಏನಾದ್ರೂ ಆದ್ರೆ ಯಾರು ಹೊಣೆ ಎಂದಿದ್ದಾರೆ.

ರಾಜ್ಯ ಸರ್ಕಾರದ ನಿರ್ಲ್ಯಕ್ಷದ ಬಗ್ಗೆ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬುಡಕಟ್ಟು ಸಮುದಾಯಗಳ ಜನರ ಜೀವನ ಸುಧಾರಿಸಲು ಪೌಷ್ಠಿಕ ಆಹಾರ ಒದಗಿಸುವ ಯೋಜನೆಯಲ್ಲಿ ಮುಗ್ಗಲು ಹಿಡಿದ ಬೆಳೆಗಳು, ಕಳಪೆ ಆಹಾರಗಳ ವಿತರಣೆಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬುಡಕಟ್ಟು ಸಮುದಾಯದ ಕುಟುಂಬಗಳ ಕುರಿತು ಕಾಂಗ್ರೆಸ್ ಸರ್ಕಾರಕ್ಕಿರುವ ತಾತ್ಸಾರ ಧೋರಣೆಯನ್ನು ಪ್ರತಿಬಿಂಬಿಸುತ್ತದೆ.

ರಾಜ್ಯದ ಸುಮಾರು 47,859 ಬುಡಕಟ್ಟು ಸಮುದಾಯಗಳ ಕುಟುಂಬಗಳಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡಲು ರಾಜ್ಯ ಸರ್ಕಾರ ವಾರ್ಷಿಕವಾಗಿ ₹120 ಕೋಟಿ ರೂ ವ್ಯಯಿಸುತ್ತಿದ್ದರೂ ಆದಿವಾಸಿ ಸುಮುದಾಯದ ಬಡವರಿಗೆ ಗುಣಮಟ್ಟದ ಆಹಾರ ಪೂರೈಕೆಯಾಗದಿರುವುದು ಸರ್ಕಾರದ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿರುವುದನ್ನು ಸಾಕ್ಷೀಕರಿಸುತ್ತದೆ.

ಕಳಪೆ ಆಹಾರಗಳ ಸೇವನೆಯಿಂದ ಅನಾರೋಗ್ಯ ಸಮಸ್ಯೆಗಳು ಉದ್ಭವಿಸಿದಲ್ಲಿ ಇದಕ್ಕೆ ಯಾರು ಹೊಣೆ? ದಪ್ಪ ಚರ್ಮದ ರಾಜ್ಯ ಸರ್ಕಾರ ಈ ಕೂಡಲೇ ಅಪೌಷ್ಟಿಕ ಆಹಾರ ತಲುಪಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಉತ್ತಮ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಲಿ’ ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ