ಮನಕಲಕುವ ಘಟನೆ: ಸಾವಿನಂಚಿನಲ್ಲಿರುವ ಹಸುಗೂಸಿಗೆ ಔಷಧ ಕಂಡುಹಿಡಿದ ತಂದೆ!

ಬುಧವಾರ, 24 ನವೆಂಬರ್ 2021 (13:12 IST)
ಕುನ್ಮಿಂಗ್ : ಇದು ಬದುಕಿನ ಅಳಿವು ಉಳಿವಿನ ಪ್ರಶ್ನೆ ಬಂದಾಗಲೂ ಸಾಧ್ಯ. ದೃಢನಿಶ್ಚಯ ಮತ್ತು ಬದ್ಧತೆ ಇದ್ದರೆ ಯಾವುದನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಈ ಮನಕಲಕುವ ಘಟನೆ ಸಾಬೀತುಪಡಿಸಿದೆ.
ಅಪರೂಪದ ಹಾಗೂ ಅಪಾಯಕಾರಿ ಕಾಯಿಲೆಯಿಂದ ಸಾವಿನಂಚಿನಲ್ಲಿದ್ದ ಎರಡು ವರ್ಷದ ತನ್ನ ಮಗುವನ್ನು ರಕ್ಷಿಸಲು ತಂದೆಯೇ ಸಂಶೋಧಕನಾದ ಕಥೆಯಿದು. ಅಂದಹಾಗೆ, ಇದು ನಡೆದಿರುವುದು ಚೀನಾದಲ್ಲಿ. ಚೀನಾದ ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್ನಲ್ಲಿ ವಾಸಿಸುತ್ತಿರುವ ಕ್ಸು ವೀ ಅವರ ಎರಡು ವರ್ಷದ ಮಗು ಹಾಯೊಯಂಗ್ ಹೆಚ್ಚೆಂದರೆ ಕೆಲವು ತಿಂಗಳು ಬದುಕುವ ಸ್ಥಿತಿಯಲ್ಲಿತ್ತು. ಅಪರೂಪದ ಆನುವಂಶಿಕ ಆರೋಗ್ಯ ಸಮಸ್ಯೆಯಿಂದ ಹೊರಬರಲು ಇದ್ದ ಏಕೈಕ ಔಷಧ ಚೀನಾದ ಯಾವುದೇ ಮೂಲೆಯಲ್ಲಿ ಲಭ್ಯವಿರಲಿಲ್ಲ. ಹೇಳಿ ಕೇಳಿ ಅದು ಕೊರೊನಾ ವೈರಸ್ ಸಾಂಕ್ರಾಮಿಕ ಉತ್ತುಂಗದಲ್ಲಿದ್ದ ಸಮಯ. ಚೀನಾ ಸೇರಿದಂತೆ ಬಹುತೇಕ ದೇಶಗಳ ಗಡಿಗಳು ವಿದೇಶಿಗರಿಗೆ ಮುಚ್ಚಿದ್ದವು. ಹೀಗಾಗಿ ಚಿಕಿತ್ಸೆಗಾಗಿ ಪರದೇಶಕ್ಕೆ ತೆರಳಲಾಗದ ಸ್ಥಿತಿ ಇತ್ತು.
ಮಗುವಿನ ಜೀವ ಉಳಿಸುವುದು ತನ್ನಿಂದ ಸಾಧ್ಯವೇ ಇಲ್ಲ ಎಂದು ಕ್ಸು ವೀ ಹತಾಶನಾಗಿ ಕೈಚೆಲ್ಲಿ ಕೂರಲಿಲ್ಲ. ಬದಲಾಗಿ ತಮ್ಮ ಮನೆಯನ್ನೇ ಪ್ರಯೋಗಾಲಯವನ್ನಾಗಿ ಮಾಡಿದರು. ಮಗನಿಗಾಗಿ ಸ್ವತಃ ಔಷಧ ಕಂಡುಹಿಡಿಯುವ ಸಾಹಸಕ್ಕೆ ಕೈಹಾಕಿದರು.
ಮೆಂಕೆಸ್ ಸಿಂಡ್ರೋಮ್
ಹಾಯೊಯಂಗ್ಗೆ ಇದ್ದಿದ್ದು ಮೆಂಕೆಸ್ ಎಂಬ ಕಾಯಿಲೆ. ಇದು ಹುಟ್ಟಿನಿಂದಲೇ ಬರುವ ಅಪರೂಪದ ಸಿಂಡ್ರೋಮ್. ಮಕ್ಕಳಲ್ಲಿ ಮಿದುಳು ಹಾಗೂ ನರ ವ್ಯವಸ್ಥೆ ಬೆಳೆಯಲು ಅತ್ಯಂತ ಮುಖ್ಯವಾದ ತಾಮ್ರದ ಅಂಶ ಕಡಿಮೆಯಾಗುವಂತೆ ಇದು ಮಾಡುತ್ತದೆ. ಮಗು ಜನಿಸುವಾಗಲೇ ಇರುವ ಈ ಕಾಯಿಲೆ ಇದ್ದರೆ, ಮೂರು ವರ್ಷಕ್ಕಿಂತ ಹೆಚ್ಚು ಸಮಯ ಬದುಕುಳಿಯುವ ಸಾಧ್ಯತೆ ಬಲು ವಿರಳ.
ಮೊಲಗಳ ಮೇಲೆ ಪ್ರಯತ್ನ
ಆರು ವಾರಗಳ ಪ್ರಯತ್ನದ ಬಳಿಕ ಕಾಪರ್ ಹಿಸ್ಟಿಡೈನ್ನ ಒಂದು ಶೀಷೆ ತಯಾರಿಸಿದ್ದರು. ಮೊದಲು ಅದನ್ನು ಮೊಲಗಳ ಮೇಲೆ ಪ್ರಯೋಗಿಸಿದರು. ಬಳಿಕ ತಮ್ಮದೇ ದೇಹಕ್ಕೆ ಸೇರಿಸಿದರು. ಮೊಲಗಳು ಆರೋಗ್ಯವಂತವಾಗಿದ್ದವು. ನಾನೂ ಹುಷಾರಾಗಿದ್ದೆ. ಹೀಗಾಗಿ ಮಗನ ಮೇಲೆ ಪ್ರಯೋಗ ಆರಂಭಿಸಿದೆ. ಮಗುವಿನಲ್ಲಿ ಯಾವುದೇ ಅಡ್ಡ ಪರಿಣಾಮ ಕಾಣಿಸದೆ ಇದ್ದರಿಂದ ಹಂತ ಹಂತವಾಗಿ ಡೋಸೇಜ್ ಹೆಚ್ಚಿಸಿದ್ದಾಗಿ ಕ್ಸು ತಿಳಿಸಿದ್ದಾರೆ. ಆದರೆ ಈ ಔಷಧ ಕಾಯಿಲೆಯನ್ನು ಗುಣಪಡಿಸಲಾರದು.
ಕಾಪರ್ ಚಿಕಿತ್ಸೆಯು ಮಗು ಜನಿಸಿದ ಮೊದಲ ಮೂರು ವಾರಗಳ ಆರಂಭದಲ್ಲಿ ನೀಡಿದರೆ ಮಾತ್ರವೇ ಕೆಲವು ಆನುವಂಶಿಕ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದಷ್ಟೇ. ಈ ಚಿಕಿತ್ಸೆಯು ಲಕ್ಷಣಗಳನ್ನು ಕಡಿಮೆ ಮಾಡಬಹುದೇ ವಿನಾ ಚೇತರಿಕೆ ನೀಡಲಾರದು ಎಂದು ಫ್ರಾನ್ಸ್ನ ಟೂರ್ಸ್ ವಿಶ್ವವಿದ್ಯಾಲಯ ಆಸ್ಪತ್ರೆಯ ಅಪರೂಪದ ಕಾಯಿಲೆಗಳ ತಜ್ಞೆ ಪ್ರೊಫೆಸರ್ ಆನಿಕ್ ಟೌಟೇನ್ ಹೇಳಿದ್ದಾರೆ. ಇದು ಕಾಯಿಲೆಯನ್ನು ಕಡಿಮೆ ಮಾಡುತ್ತದೆಯೇ ವಿನಾ ಗುಣಪಡಿಸುವುದಿಲ್ಲ ಎಂದು ಕ್ಸು ಕೂಡ ಒಪ್ಪಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ