ರುಂಡ ಚೆಂಡಾಡುತ್ತಿರುವ ಐಎಸ್ ಉಗ್ರರು; 350ಕ್ಕೂ ಹೆಚ್ಚು ಬಲಿ ಪಡೆದರು...!

ಶನಿವಾರ, 22 ಅಕ್ಟೋಬರ್ 2016 (16:20 IST)

ಇರಾಕ್: ವಾರದಿಂದ ಮೊಸೂಲ್ ಪ್ರದೇಶದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳು ತಮ್ಮ ಪ್ರಾಬಲ್ಯ ಸಾಧಿಸುತ್ತಿದ್ದು, ಇಂದು ಅವರ ಆಟಾಟೋಪ ಎಲ್ಲೆ ಮೀರಿ ಮೂರುನೂರಕ್ಕೂ ಹೆಚ್ಚು ಜನರನ್ನು ಹತ್ಯೆ ಗೈದಿದ್ದಾರೆ. ಆ ಮೂಲಕ ಉಗ್ರವಾದಿಗಳು ರಕ್ಕಸರು ಎನ್ನುವ ಸಂದೇಶ ಸಾರಿ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದಾರೆ.
 


 

ಐಎಸ್ ಉಗ್ರರು ಇರಾಕ್ ನ  ಮೊಸೂಲ್ ಪ್ರದೇಶವನ್ನು ಸುತ್ತುವರೆದು, ಅಲ್ಲಿ ಪ್ರಾಬಲ್ಯ ಸ್ಥಾಪಿಸಲೆಂದು ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಕೈಗೆ ಸಿಕ್ಕವರನ್ನೆಲ್ಲ ದಾರುಣವಾಗಿ ಕೊಂದಿದ್ದಾರೆ. ಅವರ ಕ್ರೌರ್ಯದ ಅಟ್ಟಹಾಸ ಅಮಾನುಷ ಹಂತಕ್ಕೆ ತಲುಪಿದ್ದು ವಿಶ್ವದಾದ್ಯಂತ ಪ್ರತಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೆ ಕುರ್ದೇಶ್ ನಿಯಂತ್ರಣದಲ್ಲಿರುವ ಕಿರ್ಕುಕ್ ನಗರದ ಮೇಲೆ ಮತ್ತೆ ದಾಳಿ ನಡೆಸಿ ಐವತ್ತಕ್ಕೂ ಹೆಚ್ಚು ಜನರನ್ನು ಮಣ್ಣು ಮಾಡಿದ್ದಾರೆ. ನಾಲ್ಕೈದು ದಿನಗಳಿಂದ ನಡೆಯುತ್ತಿರುವ ಅವರ ಮಾರಣ ಹೋಮದ ಕೃತ್ಯಕ್ಕೆ ಮೊಸೂಲ್ ಮತ್ತು ಕಿರ್ಕುಕ್ ನಗರಗಳ ಸುಮಾರು 350ಕ್ಕೂ ಹೆಚ್ಚು ಜನರು ಪ್ರಾಣ ತೆತ್ತಿದ್ದಾರೆ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.

 

ಐಎಸ್ ಉಗ್ರರ ಹಿಡಿತದಲ್ಲಿರುವ ಮೊಸುಲ್ ನಗರವನ್ನು ಬಿಡಿಸಿಕೊಳ್ಳುವ ಪ್ರಯತ್ನ ಅಮೆರಿಕಾ ಮಿತ್ರ ಪಡೆಯ ನೇತೃತ್ವದಲ್ಲಿ ನಡೆಯುತ್ತಿರುವಾಗಲೇ ಬಂಡುಕೋರರು, ತಮ್ಮ ಹೋರಾಟವನ್ನು ಅತಿರೇಕದ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಸರಕಾರಿ ನೆಲೆಗಳ ಮೇಲೆ ಶುಕ್ರವಾರ ನಡೆದ ಎರಡು ಮಾನವ ಬಾಂಬ್ ದಾಳಿಗಳಲ್ಲಿ 25ಕ್ಕೂ ಹೆಚ್ಚು ಮಂದಿ ಹತರಾಗಿ, ಅನೇಕರು ಗಾಯಗೊಂಡಿದ್ದಾರೆ. ಕಿರ್ಕುಕ್ ನಿಂದ 40 ಕಿ.ಮೀ. ದೂರದಲ್ಲಿರುವ ಡಿಬಿಸ್ ಬಳಿ ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಸಿದ, ಮಾನವ ಬಾಂಬರ್ ಗಳು ಹದಿನೈದು ಇರಾನಿ ಅಧಿಕಾರಿಗಳು, ಎಂಜಿನಿಯರ್ ಗಳು, ನಾಲ್ವರು ಇರಾನಿ ತಂತ್ರಜ್ಞರನ್ನು ಹತ್ಯೆ ಮಾಡಿದ್ದಾರೆ.

 

ಮುಂದುವರಿದು ನಿನ್ನೆ ತಡರಾತ್ರಿ ಇಬ್ಬರು ಉಗ್ರರು ಸಾರ್ವಜನಿಕ ಸ್ಥಳದಲ್ಲಿ ತಮ್ಮನ್ನು ತಾವೇ ಸ್ಪೋಟಿಸಿಕೊಂಡು, 16 ಮಂದಿಯನ್ನು ಹತರನ್ನಾಗಿಸಿದ್ದರು. ಇಂದು ಬೆಳಗ್ಗೆ ಉಗ್ರನೊಬ್ಬ ಸ್ವಯಂ ಸ್ಪೋಟ ಮಾಡಿಕೊಳ್ಳಲು ಅಣಿಯಾಗುತ್ತಿರುವಾಗ, ಭದ್ರತಾಪಡೆ  ಯೋಧರು ಆತನನ್ನು ಕೊಂದು ಸಂಭವಿಸಬಹುದಾದ ಅನಾಹುತವನ್ನು ತಡೆದಿದ್ದಾರೆ.ಕಿರ್ಕುಕ್ ನ ಬಹುತೇಕ ಪ್ರದೇಶಗಳಲ್ಲಿ ಬಂಡುಕೋರರು ಶಸ್ತ್ರಸಜ್ಜಿತರಾಗಿ ಅಡಗಿ ಕುಳಿತುಕೊಂಡಿದ್ದು, ಆವಾಗೀವಾಗ ಎನ್ನುವಂತೆ ದಾಳಿ ನಡೆಸುತ್ತಿದ್ದಾರೆ. ಒಟ್ಟಾರೆ ಐಎಸ್ ಉಗ್ರರ ಹೀನ ಕೃತ್ಯ ಎಲ್ಲೆ ಮೀರಿದ್ದು, ಮೊಸೂಲ್ ನಗರದಲ್ಲಿ ರಕ್ತದೋಕುಳಿಯೇ ಹರಿಯುತ್ತಿದೆ.

 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ