ನವದೆಹಲಿ: ಪ್ರಧಾನಿ ಮೋದಿ ನಿನ್ನೆ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ ಎಸ್ಎಸ್ ಸಂಘಟನೆಯನ್ನು ಹೊಗಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಕೆಂಡ ಕಾರಿದ್ದು, ಇದು ಸಂವಿಧಾನ ವಿರೋಧಿ ಸಂಘಟನೆ ಎಂದಿದ್ದರು. ಇದಕ್ಕೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದು ನೀವು ಸಂವಿಧಾನ ಅಮಾನತಿನಲ್ಲಿಟ್ಟು ತುರ್ತು ಪರಿಸ್ಥಿತಿ ಹೇರಿದ್ದು ಸರೀನಾ ಎಂದು ಪ್ರಶ್ನೆ ಮಾಡಿದ್ದಾರೆ.
ಆರ್ ಎಸ್ಎಸ್ ವಿಶ್ವದ ಅತೀ ದೊಡ್ಡ ಎನ್ ಜಿಒ. 100 ವರ್ಷದ ಸಾಧನೆ ಅಪ್ರತಿಮ ಎಂದು ಮೋದಿ ತಮ್ಮ ಭಾಷಣದಲ್ಲಿ ಹೊಗಳಿದ್ದರು. ಇದರ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡ ಕಾರಿದ್ದರು. ಆರ್ ಎಸ್ ಎಸ್ ಎಂದೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲಿಲ್ಲ. ಮೋದಿಯವರು ಆರ್ ಎಸ್ಎಸ್ ಹೊಗಳಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಸ್ವಾತಂತ್ರ್ಯೋತ್ಸವ ದಿನವೂ ಆರ್ ಎಸ್ಎಸ್ ರಾಷ್ಟ್ರ ಧ್ವಜಾರೋಹಣ ಮಾಡಲ್ಲ. ಅಂತಹ ಸಂಘಟನೆಯನ್ನು ಹೊಗಳಿ ಆ ಸ್ಥಾನಕ್ಕೆ ಮೋದಿ ಅಪವಿತ್ರಗೊಳಿಸಿದ್ದಾರೆ ಎಂದು ಸಿದ್ದರಾಮಯ್ಯ ಸುದೀರ್ಘ ಟ್ವೀಟ್ ಮಾಡಿ ಕೆಂಡ ಕಾರಿದ್ದರು.
ಇದಕ್ಕೆ ನೆಟ್ಟಿಗರು ಸಾಕಷ್ಟು ಟೀಕೆ ಮಾಡಿದ್ದಾರೆ. ನಿಮ್ಮದೇ ಕಾಂಗ್ರೆಸ್ ಪಕ್ಷ ಈ ಹಿಂದೆ ಸಂವಿಧಾನ ಅಮಾನತಿನಲ್ಲಿಟ್ಟು ಎಮರ್ಜೆನ್ಸಿ ಹೇರಲಿಲ್ವಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಆರ್ ಎಸ್ಎಸ್ ಹೊಗಳಿದ್ರೆ ನಿಮಗ್ಯಾಕೆ ಹೊಟ್ಟೆ ಉರಿ ಎಂದಿದ್ದಾರೆ.
ಆರ್ ಎಸ್ ಎಸ್ ದೇಶ ವಿರೋಧಿ ಸಂಘಟನೆಯಾದರೆ ಅದನ್ನು ನಿಷೇಧಿಸುವ ತಾಕತ್ತು ನಿಮಗಿಲ್ವಾ ಎಂದು ಕೆಲವರು ಸವಾಲು ಹಾಕಿದ್ದಾರೆ. ಇನ್ನು ಕೆಲವರು ಮೋದಿ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅದಕ್ಕೇ ತಮ್ಮ ಸ್ಥಾನ ಉಳಿಸಿಕೊಳ್ಳಲು ಆರ್ ಎಸ್ಎಸ್ ಹೊಗಳಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.