ವಿಶ್ವಸಂಸ್ಥೆ: ಜಿನೀವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿ ಸಭೆಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪಿಸಲು ಹೊರಟ ಪಾಕಿಸ್ತಾನಕ್ಕೆ ಭಾರತ ಸರಿಯಾದ ತಿರುಗೇಟು ನೀಡಿದೆ. ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ, ಭಾರತದ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪ ಮಾಡಿದ್ದ ಪಾಕಿಸ್ತಾನಕ್ಕೆ ಭಾರತ, ಸಖತ್ತಾಗಿಯೇ ಛೀಮಾರಿ ಹಾಕಿದೆ.
ಪಾಕಿಸ್ತಾನ ಒಂದು 'ವಿಫಲ ರಾಷ್ಟ್ರ'ವಾಗಿದ್ದು, ಅದರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾರತ ವಾಗ್ದಾಳಿ ನಡೆಸಿದೆ.
'ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗವಾಗಿದ್ದು, ಎಲ್ಲೆಂದರಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ಗೆ ರಕ್ಷಣೆ ನೀಡಿದವರು ಮಾನವ ಹಕ್ಕುಗಳ ಬಗ್ಗೆ ಪಾಠ ಮಾಡುತ್ತಾರೆ. ಪಾಕಿಸ್ತಾನ, ಒಸಾಮಾ ಬಿನ್ ಲಾಡೆನ್, ಹಫೀಜ್ ಸಯೀದ್ ಸೇರಿದಂತೆ ಅನೇಕ ಉಗ್ರರಿಗೆ ಆಶ್ರಯ ನೀಡುತ್ತಾ ಬಂದಿದೆ. ಇದರ ಬಗ್ಗೆ ವಿಶ್ವ ಸಮುದಾಯ ಕೇಳಿದಾಗ, ಪಾಕಿಸ್ತಾನ ಸೊಲ್ಲೆತ್ತುವುದಿಲ್ಲ. ಮುಂಬೈ ದಾಳಿಕೋರ ಹಫೀಜ್ ಸಯೀದ್, 2016ರ ಪಠಾಣ್‌ಕೋಟ್ ದಾಳಿಕೋರರು ಹಾಗೂ ಉರಿ ದಾಳಿಕೋರರ ವಿರುದ್ಧ ಪಾಕ್ ಸರಕಾರ ಮೊದಲು ವಿಶ್ವಾಸಾರ್ಹ ಕ್ರಮ ಕೈಗೊಂಡು ನ್ಯಾಯದ ಕಟಕಟೆಗೆ ಎಳೆದು ತರಲಿ' ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಎರಡನೇ ಕಾರ್ಯದರ್ಶಿಯಾಗಿರುವ ಮಿನಿ ದೇವಿ ಕುಮಾಮ್ ಆಗ್ರಹಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ