ಶಿಖರ್ ಧವನ್ ಇಲ್ಲದೇ ಹೋಗಿದ್ದರೆ ಟೀಂ ಇಂಡಿಯಾ ಕತೆ ಗೋವಿಂದಾ..!
ಶುಕ್ರವಾರ, 9 ಮಾರ್ಚ್ 2018 (09:00 IST)
ಕೊಲೊಂಬೊ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಿನ್ನೆ ನಡೆದ ಟಿ20 ಪಂದ್ಯದಲ್ಲಿ ಹಾಗೂ ಹೀಗೂ ಪ್ರಯಾಸದಿಂದ ಟೀಂ ಇಂಡಿಯಾ 6 ವಿಕೆಟ್ ಗಳ ಗೆಲುವು ಸಾಧಿಸಿದೆ.
ಮೊದಲ ಬ್ಯಾಟ್ ಮಾಡಿದ್ದ ಬಾಂಗ್ಲಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತ್ತು. ಭಾರತದ ಪರ ಯುವ ಬೌಲರ್ ಜಯದೇವ್ ಉನಾದ್ಕಟ್ 3, ವಿಜಯ್ ಶಂಕರ್ 2 ವಿಕೆಟ್ ಕಿತ್ತರು.
ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ರೋಹಿತ್ ಶರ್ಮಾ ಯಥಾವತ್ತು ಕೈ ಕೊಟ್ಟರು. 17 ರನ್ ಗಳಿಸಿ ಔಟಾದರು. ನಂತರ ಎಂದಿನಂತೆ ಶಿಖರ್ ಧವನ್ ಆಸರೆಯಾದರು. ಕಳೆದ ಪಂದ್ಯದಂತೆ ಮತ್ತೊಂದು ಅರ್ಧಶತಕ ಸಿಡಿಸಿದ ಧವನ್ 55 ರನ್ ಗಳಿಗೆ ಔಟಾದರು. ಈ ವೇಳೆ ಅನುಭವಿ ರೈನಾ 26 ರನ್ ಗಳಿಸಿದರೆ ರಿಷಬ್ ಪಂತ್ ಮತ್ತೆ 7 ರನ್ ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಬಳಿಕ ಮನೀಶ್ ಪಾಂಡೆ 19 ಬಾಲ್ ಗಳಲ್ಲಿ ಬಿರುಸಿನ 27 ರನ್ ಗಳಿಸಿ ತಂಡಕ್ಕೆ ಗೆಲುವಿನ ರನ್ ನೀಡಿದರು. ಅಂತಿಮವಾಗಿ ಭಾರತ 18.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು. ಗಮನಾರ್ಹ ಬೌಲಿಂಗ್ ಪ್ರದರ್ಶಿಸಿದ ವಿಜಯ್ ಶಂಕರ್ ಪಂದ್ಯ ಶ್ರೇಷ್ಠರಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ