ನೀವು ಹೇಳಿದಂಗೆಲ್ಲಾ ಕೇಳಕ್ಕಾಗಲ್ಲ: ಡೊನಾಲ್ಡ್ ಟ್ರಂಪ್ ಗೆ ಬೆಂಕಿಯಂತಹ ಉತ್ತರ ಕೊಟ್ಟ ಭಾರತ

Krishnaveni K

ಮಂಗಳವಾರ, 5 ಆಗಸ್ಟ್ 2025 (10:06 IST)
ನವದೆಹಲಿ: ರಷ್ಯಾದಿಂದ ತೈಲ ಖರೀದಿ ಮಾಡಬೇಡಿ ಎಂದು ಸುಂಕದ ಬೆದರಿಕೆ ಒಡ್ಡುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭಾರತ ನೀವು ಹೇಳಿದಂತೆ ಕೇಳಕ್ಕಾಗಲ್ಲ ಎಂದು ತಕ್ಕ ತಿರುಗೇಟು ನೀಡಿದೆ.

ರಷ್ಯಾದಿಂದ ಭಾರತ ತೈಲ ಖರೀದಿಸಬಾರದು. ಇದಕ್ಕಾಗಿ ನಾವು 25% ಸುಂಕ ವಿಧಿಸುತ್ತಿದ್ದೇವೆ ಎಂದು ಭಾರತದ ಮೇಲೆ ದಂಡದ ಪ್ರಯೋಗ ಮಾಡಿತ್ತು. ಜೊತೆಗೆ ಭಾರತದ್ದು ಸತ್ತ ಆರ್ಥಿಕತೆ ಎಂದು ಟ್ರಂಪ್ ನಿಂದಿಸಿದ್ದರು. ಇದು ಭಾರತವನ್ನು ಕೆರಳಿಸಿದೆ.

ಇದೀಗ ಅಮೆರಿಕಾದ ಯಾವುದೇ ಬೆದರಿಕೆಗೆ ಜಗ್ಗದೇ ದಿಟ್ಟ ಉತ್ತರ ನೀಡಲು ಮುಂದಾಗಿದೆ. ಅಮೆರಿಕಾ ಬೆದರಿಕೆಗೆ ಜಗ್ಗದ ಭಾರತ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದೆ. ಇದೀಗ ರಷ್ಯಾದಿಂದ 30 ಲಕ್ಷ ಬ್ಯಾರೆಲ್ ಕಚ್ಚಾ ತೈಲ  ಭಾರತಕ್ಕೆ ತಲುಪಿದೆ.

ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲಿದ್ದೇವೆ ಎಂದಿರುವ ಭಾರತ ರಷ್ಯಾದಿಂದ ಕನಿಷ್ಠ 4 ಟ್ಯಾಂಕರ್ ತೈಲ ಆಮದು ಮಾಡಿಕೊಂಡಿದ್ದು ಭಾರತದ ತೈಲ ಸಂಗ್ರಹಗಾರಗಳಿಗೆ ಇದು ಬಂದು ತಲುಪಿದೆ. ಯಾವುದೇ ಕಾರಣಕ್ಕೂ ತೈಲ ಆಮದು ನಿಲ್ಲಿಸಬಾರದು ಎಂದು ದೇಶದ ಎಲ್ಲಾ ತೈಲ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ತಾಕೀತು ಮಾಡಿದೆ. ಈ ಮೂಲಕ ನಿಮ್ಮ ಬೆದರಿಕೆಯೆಲ್ಲಾ ನಮ್ಮ ಮುಂದೆ ನಡೆಯಲ್ಲ ಎಂದು ಡೊನಾಲ್ಡ್ ಟ್ರಂಪ್ ಗೆ ಸೆಡ್ಡು ಹೊಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ