ನವದೆಹಲಿ: ರಷ್ಯಾ ಜೊತೆ ತೈಲ ವ್ಯಾಪಾರ ಮುಂದುವರಿಸಿರುವ ಭಾರತದ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಟ್ಟೆ ಕಿಚ್ಚಿನಿಂದ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದೀಗ ಉಕ್ರೇನ್ ಮೇಲೆ ಯುದ್ಧಕ್ಕೆ ರಷ್ಯಾಗೆ ಭಾರತ ಹಣ ನೀಡುತ್ತಿದೆ ಎಂದು ಆರೋಪಿಸಿದ್ದರು. ಅದಕ್ಕೆ ಭಾರತದ ವಿದೇಶಾಂಗ ಇಲಾಖೆ ತಕ್ಕ ತಿರುಗೇಟು ಕೊಟ್ಟಿದೆ.
ತನ್ನ ಎಚ್ಚರಿಕೆಯ ಹೊರತಾಗಿಯೂ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಭಾರತದ ಮೇಲೆ ಹೆಚ್ಚು ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ರಷ್ಯಾದಿಂದ ತೈಲ ಖರೀದಿಸುವ ಮೂಲಕ ಉಕ್ರೇನ್ ವಿರುದ್ಧ ಯುದ್ಧಕ್ಕೆ ಹಣ ಸಹಾಯ ಮಾಡಿದಂತಾಗಿದೆ ಎಂದು ಆರೋಪಿಸಿದ್ದರು.
ತನ್ನ ಮೇಲೆ ಡೊನಾಲ್ಡ್ ಟ್ರಂಪ್ ಆರೋಪ ಮಾಡುತ್ತಿರುವುದಕ್ಕೆ ಭಾರತ ತಿರುಗಿಬಿದ್ದಿದೆ. ಈ ಬಗ್ಗೆ ವಿದೇಶಾಂಗ ಇಲಾಖೆ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಉಕ್ರೇನ್ ಸಂಘರ್ಷದ ಬಳಿಕ ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ಅಮೆರಿಕಾ ಮತ್ತು ಐರೋಪ್ಯ ಒಕ್ಕೂಟಗಳು ಭಾರತವನ್ನು ಟಾರ್ಗೆಟ್ ಮಾಡಿವೆ. ಈ ಹಿಂದೆ ಇದನ್ನು ಅಮೆರಿಕಾವೇ ಉತ್ತೇಜಿಸಿತ್ತು. ಆದರೆ ಈಗ ವಿರೋಧಿಸುತ್ತಿದೆ.
ಅಮೆರಿಕಾ ಸೇರಿದಂತೆ ಐರೋಪ್ಯ ಒಕ್ಕೂಟಗಳು ರಷ್ಯಾ ಜೊತೆಗೆ ವ್ಯಾಪಾರ ಒಪ್ಪಂದ ಹಿಂದಿನಂತೇ ಮುಂದುವರಿಸಿರುವಾಗ ನಮ್ಮನ್ನು ಪ್ರಶ್ನಿಸಿದರೆ ಹೇಗೆ? ಐರೋಪ್ಯ ಒಕ್ಕೂಟ ರಾಷ್ಟ್ರಗಳು ಇಂಧನವಷ್ಟೇ ಅಲ್ಲ ಕಬ್ಬಿಣ, ಉಕ್ಕು ಸೇರಿ ಹಲವು ವಸ್ತುಗಳ ವ್ಯಾಪಾರ ನಡೆಸುತ್ತಿವೆ. ಅಮೆರಿಕಾ ತನ್ನ ಪರಮಾಣು ಕ್ಷೇತ್ರಕ್ಕೆ ಬೇಕಾಗಿರುವ ಯುರೇನಿಯಂ ಹೆಕ್ಸಾಫ್ಲೋರೈಡ್ ರಾಸಾಯನಿಕ, ಇನ್ನಿತರ ಉತ್ಪನ್ನಗಳನ್ನು ರಷ್ಯಾದಿಂದಲೇ ಖರೀದಿಸುತ್ತಿದೆ. ಹಾಗಿರುವಾಗ ನಾವು ಈ ಮೊದಲೇ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ತೈಲ ಖರೀದಿಸದರೆ ಪ್ರಶ್ನೆ ಮಾಡುತ್ತಿರುವುದು ಯಾಕೆ? ಇಂತಹ ಇಬ್ಬಗೆಯ ನೀತಿ ಬೇಡ ಎಂದು ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದೆ.