ಪಾಕಿ ಸೈನಿಕರ ಗುಂಡಿಗೆ ಮತ್ತೊಬ್ಬ ಯೋಧ ಬಲಿ

ಮಂಗಳವಾರ, 1 ನವೆಂಬರ್ 2016 (09:37 IST)
ಜಮ್ಮು: ಪದೇ ಪದೇ ಕಾಲು ಕೆದರಿ ಕಾದಾಟಕ್ಕೆ ಬರುತ್ತಿರುವ ಪಾಕಿ ಸೈನಿಕರು ಸೋಮವಾರ ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಆ ದಾಳಿಯಲ್ಲಿ ಭಾರತೀಯ ಯೋಧನೋರ್ವ ಸಾವಿಗೀಡಾಗಿದ್ದು, ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದಾರೆ.
 

 
ಜಮ್ಮು ಕಾಶ್ಮೀರದ ಪಾಕ್‌ ಗಡಿಯ ಪೂಂಚ್‌ ಹಾಗೂ ರಜೋರಿ ವಲಯದಲ್ಲಿ ಪಾಕಿಸ್ತಾನ ಪಡೆ ಮಧ್ಯಾಹ್ನ ಏಕಾಏಕಿ ಗುಂಡಿನ ದಾಳಿ ನಡೆಸಿತು. ಪಹರೆಯಲ್ಲಿದ್ದ ಸೈನಿಕರು ಪ್ರತಿಯಾಗಿ ದಾಳಿ ನಡೆಸಿದ್ದು, ಅವರನ್ನು ಹಿಮ್ಮೆಟ್ಟಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಅದೇ ವೇಳೆ ಪಾಕಿ ಸೈನಿಕರ ಗುಂಡೊಂದು ಭಾರತೀಯ ಯೋಧನಿಗೆ ತಾಕೀದ ಪರಿಣಾಮ ಅಲ್ಲಿಯೇ ಹುತಾತ್ಮನಾಗಿದ್ದಾನೆ.
 
ಇದಕ್ಕೂ ಮುನ್ನ ಮುಂಜಾನೆ 9ರ ಸಮಯಕ್ಕೆ ಪೂಂಚ್‌ ಜಿಲ್ಲೆಯ ಬಾಲ್‌ಕೋಟ್‌ ಮತ್ತು ಮಾನ್‌ಕೋಟ್‌ ಪ್ರದೇಶದಲ್ಲಿ ಪಾಕಿ ಸೈನಿಕರು ಅಪ್ರಚೋದಿತ ದಾಳಿ ನಡೆಸಿದ್ದರು. 120 ಎಂಎಂ, 83 ಎಂಎಂ ಫಿರಂಗಿಗಳು ಹಾಗೂ ಸ್ವಯಂಚಾಲಿತ ಬಂದೂಕುಗಳನ್ನು ಬಳಸಿ ದಾಳಿ ನಡೆಸಿದ್ದರು. ಆ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಭಾರತೀಯ ಸೇನೆ ಸಹ ಪ್ರತಿ ದಾಳಿ ನಡೆಸಿದೆ ಎಂದು ಸೇನೆ ವಕ್ತಾರರು ತಿಳಿಸಿದ್ದಾರೆ.
 
ಉರಿ ಮೇಲೆ ಉಗ್ರರು ದಾಳಿ ಮಾಡಿದ ಬಳಿಕ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿ ಹತ್ತೊಂಬತ್ತು ಉಗ್ರರನ್ನು ಸದೆ ಬಡೆದಿತ್ತು. ಆ ದಾಳಿಯ ನಂತರ ಕೆರಳಿರುವ ಪಾಕ್ ಈವರೆಗೆ ಗಡಿ ಪ್ರದೇಶದಲ್ಲಿ ಸುಮಾರು 60 ಬಾರಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ನಡೆಸಿದೆ. ಪರಿಣಾಮ ಒಬ್ಬ ಪೊಲೀಸ್‌, ಮೂವರು ನಾಗರಿಕರು ಸೇರಿದಂತೆ ಎಂಟು ಭದ್ರತಾ ಸಿಬ್ಬಂದಿ ಮರಣ ಹೊಂದಿದ್ದಾರೆ. ಜೊತೆಗೆ ಸುಮಾರು ಐವತ್ತರಷ್ಟು ನಾಗರಿಕರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ