ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಆತ್ಮಾಹುತಿ ದಾಳಿ: ಐಸಿಸ್ ಕೃತ್ಯವೆಂದ ಟರ್ಕಿಸ್ ಪ್ರಧಾನಿ

ಬುಧವಾರ, 29 ಜೂನ್ 2016 (14:52 IST)
ಟರ್ಕಿಯ ಪ್ರಧಾನ ವಿಮಾನ ನಿಲ್ದಾಣ ಇಸ್ತಾಂಬುಲ್‌ನಲ್ಲಿ ಮಂಗಳವಾರ ಮೂರು ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು ಕನಿಷ್ಠ 36 ಜನ ಸತ್ತು ಸುಮಾರು 100 ಜನ ಗಾಯಗೊಂಡಿದ್ದಾರೆ. 

ಕೃತ್ಯದ ಹಿಂದೆ ಐಸಿಸ್ ಉಗ್ರ ಸಂಘಟನೆ ಪಾತ್ರವಿದೆ ಎಂದು ಟರ್ಕಿ ಪ್ರಧಾನಿ ಬಿನಾಲಿ  ಯಿಲ್ಡ್ರೀಮ್ ಆರೋಪಿಸಿದ್ದಾರೆ. 
 
ಟ್ಯಾಕ್ಸಿ ಮೂಲಕ ವಿಮಾನ ನಿಲ್ದಾಣಕ್ಕೆ ಬಂದ ಮೂವರು ಉಗ್ರರು ಪಾರ್ಕಿಂಗ್ ಪ್ರದೇಶದಿಂದಲೇ ಗುಂಡಿನ ದಾಳಿ ಆರಂಭಿಸಿದರು. ನಂತರ ವಿಮಾನ ನಿಲ್ದಾಣಕ್ಕೆ ನುಗ್ಗಿ ತಮ್ಮನ್ನು ಸ್ಫೋಟಿಸಿಕೊಂಡಿದ್ದಾರೆ.
 
ಕೃತ್ಯವನ್ನು ಖಂಡಿಸಿರುವ ಆಸ್ಟ್ರೇಲಿಯಾ ಸರ್ಕಾರ ಘಟನೆಗೆ ಕಂಬನಿ ಮಿಡಿದಿದೆ.
 
ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಭಯೋತ್ಪಾದನೆ ವಿರುದ್ಧ ಹೋರಾಡಲು ಎಲ್ಲರೂ ಒಂದಾಗಿ ಹೆಜ್ಜೆ ಇಡಬೇಕಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ