ಒಡಿಶಾದ ಪುರಿ ಜಗನ್ನಾಥ ಯಾತ್ರೆಯಲ್ಲಿ ಕಾಲ್ತುಳಿತ: 600 ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

Krishnaveni K

ಶನಿವಾರ, 28 ಜೂನ್ 2025 (10:06 IST)
ಒಡಿಶಾ: ಇಲ್ಲಿನ ಪುರಿ ಜಗನ್ನಾಥ ಯಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿದ್ದು 600 ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. 40 ಕ್ಕು ಹೆಚ್ಚು ಭಕ್ತರಿಗೆ ಗಂಭೀರ ಗಾಯಗಳಾಗಿರುವ ವರದಿಯಾಗಿದೆ.
 

ವಿಶ್ವ ವಿಖ್ಯಾತ ಪುರಿ ಜಗನ್ನಾಥ ಯಾತ್ರೆಯಲ್ಲಿ ಪ್ರತೀ ಬಾರಿಯೂ ಲಕ್ಷಾಂತರ ಮಂದಿ ಭಾಗಿಯಾಗುತ್ತಾರೆ. ಈ ಬಾರಿಯೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಜನದಟ್ಟಣೆ ನಡುವೆ ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ.

ಭದ್ರತೆಗಾಗಿ 10 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.ಹಾಗಿದ್ದರೂ ಪ್ರಯೋಜನವಾಗಿಲ್ಲ. ತಕ್ಷಣವೇ ಅಸ್ವಸ್ಥರಾದವರನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ. ಬಲಭದ್ರನ ತಾಳಧ್ವಜ ರಥ ತೆಳೆಯುವ ವೇಳೆ ವಿಳಂಬವಾಗಿತ್ತು. ಈ ವೇಳೆ ಗೊಂದಲವುಂಟಾಗಿ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ.

ರಥ ಎಳೆಯುವಾಗ ಹಗ್ಗ ಸ್ಪರ್ಶಿಸಲು ಜನರು ನೂಕುನುಗ್ಗಲು ನಡೆಸಿದ್ದರಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಚಿನ್ನಸ್ವಾಮಿ ಮೈದಾನ ಬಳಿ ನಡೆದಿದ್ದ ಕಾಲ್ತುಳಿತ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅದು ಮಾಸುವ ಮುನ್ನವೇ ಇಲ್ಲಿ ಕಾಲ್ತುಳಿತವಾದ ವರದಿಯಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ