ಚೀನಾ ಭೇಟಿಯ ಬಳಿಕ ಮತ್ತೆ ಭಾರತವನ್ನು ಕೆಣಕಿದ ಮಾಲ್ಡೀವ್ಸ್ ಅಧ್ಯಕ್ಷ

Krishnaveni K

ಭಾನುವಾರ, 14 ಜನವರಿ 2024 (09:43 IST)
ನವದೆಹಲಿ: ದೈತ್ಯ ರಾಷ್ಟ್ರ ಚೀನಾವನ್ನು ಭೇಟಿ ಮಾಡಿದ ಬಳಿಕ ಮಾಲ್ಡೀವ್ಸ್ ಗೆ ಹುಂಬು ಧೈರ್ಯ ಬಂದಂತಿದೆ. ಹೀಗಾಗಿಯೇ ಮಾಲ್ಡೀವ್ಸ್ ಅಧ‍್ಯಕ್ಷ ಮೊಹಮ್ಮದ್ ಮೊಯಿಝು ಭಾರತವನ್ನು ಮತ್ತೆ ಕೆಣಕಿದ್ದಾರೆ.

ಮಾಲ್ಡೀವ್ಸ್ ಸಚಿವರಿಬ್ಬರು ಭಾರತ ಮತ್ತು ಪ್ರಧಾನಿ ಮೋದಿಗೆ ಅವಹೇಳನ ಮಾಡಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹಳಸಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಮಾಲ್ಡೀವ್ಸ್ ಪ್ರವಾಸಕ್ಕೆ ಬಹಿಷ್ಕಾರ ಹಾಕುವ ಮೂಲಕ ಭಾರತೀಯರು ಆ ದೇಶದ ಆದಾಯಕ್ಕೆ ಪೆಟ್ಟು ಕೊಟ್ಟಿದ್ದಾರೆ. ಅಲ್ಲದೆ, ಅವಹೇಳನಕಾರೀ ಹೇಳಿಕೆ ನೀಡಿದ ಸಚಿವರನ್ನು ವಜಾ ಮಾಡಲು ಭಾರತದ ಪಟ್ಟು ಹಿಡಿದಿತ್ತು. ಅದರಂತೆ ಅನಿರ್ದಿಷ್ಟಾವಧಿಗೆ ಸಚಿವರನ್ನು ಅಮಾನತೂ ಮಾಡಿದೆ.

ಆದರೆ ಈ ನಡುವೆ ಚೀನಾಕ್ಕೆ ಭೇಟಿ ನೀಡಿದ್ದ ಅಧ‍್ಯಕ್ಷ ಮೊಹಮ್ಮದ್ ಮೊಯಿಝುಗೆ ಆ ದೇಶದ ಬೆಂಬಲ ಹುಂಬು ಧೈರ್ಯ ಕೊಟ್ಟಿದೆ. ಪುಟ್ಟ ದೇಶವಾದರೂ ಮಾಲ್ಡೀವ್ಸ್ ಆಂತರಿಕ ವಿಚಾರದಲ್ಲಿ ಹೊರಗಿನವರು ತಲೆ ಹಾಕಿವಂತಿಲ್ಲ ಎಂದು ಚೀನಾ ಅಧ್ಯಕ್ಷರು ಭಾರತಕ್ಕೆ ಪರೋಕ್ಷ ಟಾಂಗ್ ಕೊಟ್ಟಿದ್ದರು.

ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮೊಯಿಝು ಕೂಡಾ ಭಾರತಕ್ಕೆ ಟಾಂಗ್ ಕೊಟ್ಟಿದ್ದಾರೆ. ‘ನಮ್ಮ ದೇಶ ಚಿಕ್ಕದಾಗಿರಬಹುದು. ಆದರೆ ನಮ್ಮನ್ನು ಬೆದರಿಸುವ ಹಕ್ಕು ನಾವು ಯಾರಿಗೂ ಕೊಟ್ಟಿಲ್ಲ’ ಎಂದಿದ್ದಾರೆ.  ಭಾರತದ ಆಕ್ರೋಶದಿಂದ ಥಂಡಾ ಹೊಡೆದಿದ್ದ ಮಾಲ್ಡೀವ್ಸ್ ಅಧ್ಯಕ್ಷರು ಈಗ ಚೀನಾ ಬೆಂಬಲ ಸಿಗುತ್ತಿದ್ದಂತೇ ಧೈರ್ಯ ತಂದುಕೊಂಡು ಭಾರತವನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ