ಅಮೆರಿಕಾ: ಸತ್ತ ಮೇಲೆ ವಿಮೆ ಸಿಗುತ್ತದೆ ಎಂದು ಸಾವಿನ ನಾಟಕವಾಡುವವರನ್ನು ಇಲ್ಲವೇ ಕುಟುಂಬದವರನ್ನೇ ಸಾಯಿಸುವ ಘಟನೆಗಳನ್ನು ಕೇಳಿದ್ದೇವೆ. ಆದರೆ ಅಮೆರಿಕಾದಲ್ಲಿ ವ್ಯಕ್ತಿಯೊಬ್ಬ ವಿಮೆ ಹಣಕ್ಕಾಗಿ ತನ್ನ ಸ್ವಂತ ಕಾಲುಗಳನ್ನೇ ಕತ್ತರಿಸಿಕೊಂಡು ನಾಟಕವಾಡಿ ಸಿಕ್ಕಿಬಿದ್ದಿದ್ದಾನೆ.
60 ವರ್ಷದ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ. ಆದರೆ ವಿಮೆ ಹಣ ಪಡೆಯಲು ಉಪಯೋಗವಿಲ್ಲದ ಕಾಲುಗಳನ್ನು ಕತ್ತರಿಸಿಕೊಂಡು ಟ್ರ್ಯಾಕ್ಟರ್ ಚಲಾಯಿಸುವಾಗ ಅಪಘಾತವಾಗಿ ಕಾಲು ಕಳೆದುಕೊಂಡೆ ಎಂದು ವಿಮೆ ಹಣಕ್ಕೆ ಅರ್ಜಿ ಹಾಕಿದ್ದ.
ವಿಚಾರಣೆ ನಡೆಸಿದಾಗ ಅಂತಹ ಯಾವುದೇ ಅಪಘಾತವಾಗಿಲ್ಲ ಮತ್ತು ಕಾಲೂ ಎಲ್ಲೂ ಇಲ್ಲ ಎಂದು ಪೊಲೀಸರಿಗೆ ತಿಳಿದುಬಂದಿದೆ. ಅಲ್ಲದೆ, ಆತ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ವ್ಯಕ್ತಿ ಟ್ರ್ಯಾಕ್ಟರ್ ಹೇಗೆ ಚಲಾಯಿಸಿದ ಎಂದು ಅನುಮಾನಗೊಂಡ ಪೊಲೀಸರು ಮತ್ತಷ್ಟು ತನಿಖೆ ಚುರುಕುಗೊಳಿಸಿದರು. ಅಲ್ಲದೆ ಕಾಲು ಕತ್ತರಿಸಿದ ರೀತಿ ನೋಡಿದರೆ ಟ್ರ್ಯಾಕ್ಟರ್ ಅಪಘಾತದಲ್ಲಿ ತಂಡಾದಂತಿರಲಿಲ್ಲ.
ಹೀಗಾಗಿ ತನಿಖೆ ನಡೆಸಿದ ಪೊಲೀಸರಿಗೆ ಆತ ತುಂಡಾದ ಕಾಲುಗಳನ್ನು ಬಕೆಟ್ ಒಂದರಲ್ಲಿ ಬಚ್ಚಿಟ್ಟಿದ್ದು ಕಂಡುಬಂದಿದೆ. ಆಗ ಆಕ್ಸಿಡೆಂಟ್ ನ ಸುಳ್ಳು ಕತೆ ಬಯಲಾಗಿದೆ. ಪಾರ್ಶ್ವವಾಯುವಿಗೆ ಒಳಗಾದ ತನ್ನ ಕಾಲಿನಿಂದ ಯಾವುದೇ ಉಪಯೋಗವಿಲ್ಲ ಎಂದು ಈ ರೀತಿ ಮಾಡಿದ್ದಾಗಿ ನಿಜ ಬಾಯ್ಬಿಟ್ಟಿದ್ದಾನೆ. ಇದನ್ನು ಕೇಳಿ ವಿಮೆ ಅಧಿಕಾರಿಗಳಿಗೇ ಅಚ್ಚರಿಯಾಗಿದೆ.