ವೃದ್ಧೆಯನ್ನ ಕೊಂದ ಹಂತಕರು ದೋಚಿದ್ದ ಆಭರಣಗಳು ನಕಲಿ
ಬೆಂಗಳೂರು : ಸುಮಾರು 30 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ದಿನೇಶ್ ಸಾಲ ತೀರಿಸಲು ಸುಶೀಲಮ್ಮ ಬಳಿ ಹಣ ಕೇಳಿದ್ದ. ಆದರೆ ಸುಶೀಲಮ್ಮ ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಆಕೆಯನ್ನು ಕೊಂದು ಹಣ ದೋಚಲು ದಿನೇಶ್ ಸ್ಕೆಚ್ ಹಾಕಿದ್ದ. ಒಂಟಿ ವೃದ್ಧೆಯನ್ನು ಹಣದಾಸೆಗೆ ಕೊಂದು ಡ್ರಮ್ ನಲ್ಲಿ ತುಂಬಿದ್ದ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಮಾಹಿತಿ ದೊರತಿದೆ. ಆಪಾದಿತ ವ್ಯಕ್ತಿ ದಿನೇಶ್ ವೃದ್ಧೆ ಸುಶೀಲಮ್ಮ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆಕೆಯ ಬಳಿ ದೋಚಿದ್ದ ಆಭರಣಗಳೆಲ್ಲವೂ ನಕಲಿಯಾಗಿತ್ತು ಎಂದು ಹೇಳಿದ್ದಾನೆ.
ಸುಶೀಲಮ್ಮ ಅವರನ್ನು ಹತ್ಯೆಗೈದು ಅವರ ಮೈಮೇಲಿದ್ದ ಆಭರಣಗಳನ್ನು ಮಾರಲು ಹೋದಾಗ ಅವುಗಳು ರೋಲ್ಡ್ ಗೋಲ್ಡ್ ಎಂದು ತಿಳಿದುಬಂದಿತ್ತು. ಕಿವಿಯೋಲೆಗಳು ಮಾತ್ರ ಬಂಗಾರದ್ದಾಗಿತ್ತೆಂದು ಸಾಬೀತಾಗಿತ್ತು. ಅದನ್ನೇ ಮಾರಿ ಅಜ್ಜಿಯ ಶವವನ್ನು ಸಾಗಿಸಲು ಡ್ರಮ್ ಖರೀದಿಸಿದ್ದಾಗಿ ದಿನೇಶ್ ವಿಚಾರಣೆಯ ವೇಳೆ ತಿಳಿಸಿದ್ದಾನೆ.