ನ್ಯೂಯಾರ್ಕ್: ಮೂರು ನರಭಕ್ಷಕ ಮೊಸಳೆಗಳು ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ಪತ್ತೆಯಾಗಿದ್ದು, 18 ಅಡಿ ಉದ್ದ ಬೆಳೆಯುವ ಸಾಮರ್ಥ್ಯವನ್ನು ಅವು ಹೊಂದಿದ್ದು, ಸಣ್ಣ ಕಾರಿನ ಗಾತ್ರವನ್ನು ಮುಟ್ಟುತ್ತವೆ ಎಂದು ಡಿಎನ್‌ಎ ಪರೀಕ್ಷೆಗಳಿಂದ ದೃಢಪಟ್ಟಿದೆ. ನೈಲ್ ಮೊಸಳೆಗಳು 2010 ಮತ್ತು 2014ರ ನಡುವೆ ಜನರ ಮೇಲೆ 480 ದಾಳಿಗಳನ್ನು ಮಾಡಿದ್ದು, 123 ಜನರನ್ನು ಆಫ್ರಿಕಾದಲ್ಲಿ ಕೊಂದಿವೆ.
ಫ್ಲೋರಿಡಾದಲ್ಲಿ ದಾಳಿಕೋರ ಮೊಸಳೆಗಳನ್ನು 2000 ಮತ್ತು 2014ರ ಅವಧಿಯಲ್ಲಿ ಸೆರೆಹಿಡಿದು ಫ್ಲೋರಿಡಾ ವಿವಿ ವಿಜ್ಞಾನಿಗಳು ಅವುಗಳ ಡಿಎನ್‌ಎ ವಿಶ್ಲೇಷಣೆ ಮಾಡಿ ಆಹಾರ ಪದ್ಧತಿ ಮತ್ತು ಬೆಳವಣಿಗೆ ಅಭ್ಯಾಸ ಮಾಡಿದರು. ಈ ಮೊಸಳೆಗಳು ನೈಲ್ ಮೊಸಳೆಗಳೆಂದು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಈ ಪ್ರಬೇಧಗಳು ಫ್ಲೋರಿಡಾದಲ್ಲಿ ಉಳಿಯಬಲ್ಲವು ಎಂದು ತಿಳಿಸಿದ್ದಾರೆ.
ಆದಾಗ್ಯೂ, ನೈಲ್ ಮೊಸಳೆಗಳ ದೊಡ್ಡ ಹಿಂಡನ್ನು ದಕ್ಷಿಣ ಆಫ್ರಿಕಾ ಮತ್ತು ಮಡಗಾಸ್ಕರ್‌ನಿಂದ ಆಮದು ಮಾಡಿಕೊಂಡು ಡಿಸ್ನಿ ಎನಿಮಲ್ ಕಿಂಗ್ಡಮ್ ಮುಂತಾದ ಪ್ರದೇಶಗಳಲ್ಲಿ ಪ್ರದರ್ಶನಕ್ಕೆ ಮತ್ತು ಫ್ಲೋರಿಡಾದ ಸಾಕುಪ್ರಾಣಿಗಳ ವ್ಯಾಪಾರಕ್ಕೆ ತರಲಾಗಿತ್ತು. ಬಹುಶಃ ಆ ಮಾರ್ಗವಾಗಿ ಪ್ಲೋರಿಡಾದಲ್ಲಿ ಉಳಿದು ನರಮಾಂಸ ಭಕ್ಷಕವಾಗಿ ಪರಿವರ್ತನೆಯಾಗಿರಬಹುದು ಎಂದು ಭಾವಿಸಲಾಗಿದೆ.