ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿರುವ ಸರಣಿ ಹೃದಯಾಘಾತದ ಹಿನ್ನಲೆಯಲ್ಲಿ ಸರ್ಕಾರ ಜಯದೇವ ವೈದ್ಯರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿತ್ತು. ಇದೀಗ ವರದಿ ಲೀಕ್ ಆಗಿದ್ದು ಕೊವಿಡ್ ಲಸಿಕೆಯಿಂದಲೇ ಹೃದಯಾಘಾತವಾಗ್ತಿದೆಯಾ ಇಲ್ಲವೋ ಎಂದು ಬಹಿರಂಗವಾಗಿದೆ.
ಕೊವಿಡ್ ಅಥವಾ ಕೊವಿಡ್ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ನಡೆಸಿರುವ ಅಧ್ಯಯನ ವರದಿ ಸಿದ್ಧಗೊಂಡಿದೆ. ಇಂದು ಅಥವಾ ಸೋಮವಾರ ಮುಖ್ಯಮಂತ್ರಿಗಳಿಗೆ ಸಲ್ಲಿಸಿಕೆಯಾಗಲಿದೆ.
ಮೂಲಗಳ ಪ್ರಕಾರ ತಜ್ಞರ ಸಮಿತಿ ಅಧ್ಯಯನದಲ್ಲಿ ಕೊವಿಡ್ ಅಥವಾ ಕೊವಿಡ್ ಲಸಿಕೆಯಿಂದ ಹಠಾತ್ ಹೃದಯಾಘಾತ ಸಂಭವಿಸುತ್ತಿಲ್ಲ ಎಂದು ವರದಿ ನೀಡಲಾಗಿದೆ ಎನ್ನಲಾಗಿದೆ. ಕೊವಿಡ್ ಲಸಿಕೆಯಿಂದ ಹೃದಯಾಘಾತ ಪ್ರಮಾಣ ಹೆಚ್ಚಾಗುತ್ತಿದೆಯೇ ಎಂದು ಸಿಎಂ ಸಿದ್ದರಾಮಯ್ಯ ತನಿಖೆ ನಡೆಸಲು ಸೂಚಿಸಿದ್ದರು. ಆದರೆ ತನಿಖೆಯಲ್ಲಿ ಕೊವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಎಂದು ತಿಳಿದುಬಂದಿದೆ.
ಆದರೆ ಇನ್ನೂ ನರ ವಿಜ್ಞಾನ ವಿಭಾಗದಿಂದ ವರದಿ ಬರಬೇಕಿದೆ. ಇದಾದ ಬಳಿಕ ಸಂಪೂರ್ಣ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಲಿದ್ದಾರೆ. ಈಗಾಗಲೇ ಐಸಿಎಂಆರ್, ಏಮ್ಸ್ ಸಂಸ್ಥೆಗಳು ಕೊವಿಡ್ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಎಂದು ವರಿದ ನೀಡಿದ್ದವು.