ಅಹ್ಮದಾಬಾದ್: ಇತ್ತೀಚೆಗೆ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 270 ಕ್ಕೂ ಹೆಚ್ಚು ಮಂದಿ ಸುಟ್ಟು ಕರಕಲಾಗಿದ್ದರು. ಇದೀಗ ಸಂತ್ರಸ್ತರ ಕುಟುಂಬಗಳಿಗೆ ನೀಡಬೇಕಾದ ಹಣದ ವಿಚಾರದಲ್ಲಿ ಏರ್ ಇಂಡಿಯಾ ಕಳ್ಳಾಟವಾಡುತ್ತಿದೆಯೇ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಏರ್ ಇಂಡಿಯಾ ಕೂಡಾ ಸ್ಪಷ್ಟನೆ ನೀಡಿದೆ.
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದವರ ಕುಟುಂಬಸ್ಥರಿಗೆ 1 ಕೋಟಿ ರೂ. ಪರಿಹಾರ ನೀಡುವುದಾಗಿ ಏರ್ ಇಂಡಿಯಾ ಘೋಷಿಸಿತ್ತು. ಅದಾದ ಬಳಿಕ 25 ಲಕ್ಷ ರೂ. ಮಧ್ಯಂತರ ಪರಿಹಾರ ನೀಡಲು ಮುಂದಾಗಿತ್ತು.
ಆದರೆ ಈಗ ಪರಿಹಾರ ಹಣವನ್ನು ಕುಟುಂಬಸ್ಥರಿಗೆ ನೀಡಲು ಏರ್ ಇಂಡಿಯಾ ಸಂಸ್ಥೆ ಚಿಕ್ಕದಾದ ಉಸಿರುಗಟ್ಟಿಸುವ ಕೊಠಡಿಯೊಂದರಲ್ಲಿ ಕುಟುಂಬಸ್ಥರನ್ನು ಕೂಡಿ ಹಾಕಿ ಯಾವುದ್ಯಾವುದೋ ಕಾಗದ ಪತ್ರಗಳಿಗೆ ಸಹಿ ಹಾಕಿಸುತ್ತಿದೆ ಎಂದು ಸಂತ್ರಸ್ತರ ಕುಟುಂಬದ ಪರ ವಕೀಲರಾಗಿರುವ ಬ್ರಿಟನ್ ಮೂಲದ ನೀನನ್ ಆರೋಪಿಸಿದ್ದಾರೆ.
ಕೆಲವು ಮಾಹಿತಿಗಳನ್ನು ಕುಟುಂಬಸ್ಥರಿಗೂ ನೀಡಲು ಕಷ್ಟವಾಗುತ್ತಿದೆ. ಅದರ ಮೇಲೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ಈ ಮೂಲಕ ಏರ್ ಇಂಡಿಯಾ ಪರಿಹಾರ ಹಣ ಉಳಿತಾಯ ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಏರ್ ಇಂಡಿಯಾ, ಸಂತ್ರಸ್ತರ ಕುಟುಂಬಗಳಿಗೆ ಧನ ಸಹಾಯ ನೀಡುವುದು ನಮ್ಮ ನಂ.1 ಆದ್ಯತೆಯಾಗಿರುತ್ತದೆ. ಸರಿಯಾದ ವ್ಯಕ್ತಿಗಳಿಗೆ ಪರಿಹಾರ ಹಣ ಸಿಗಬೇಕು ಎಂದು ನಾವು ಶ್ರಮಿಸುತ್ತಿದ್ದೇವೆ. ಇದರಲ್ಲಿ ಮೋಸ ಏನೂ ಇಲ್ಲ. ಈಗಾಗಲೇ ಮಧ್ಯಂತರ ಪರಿಹಾರ ಹಣವನ್ನೂ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿಕೊಂಡಿದೆ.
ಕುಟುಂಬಸ್ಥರ ಆದಾಯ, ವೃತ್ತಿಯನ್ನೂ ಕೇಳಲಾಗುತ್ತಿದೆ. ಇದೆಲ್ಲವನ್ನೂ ಯಾಕೆ ಫಾರಂನಲ್ಲಿ ನಾವು ಭರ್ತಿ ಮಾಡಬೇಕು? ಎಂಬುದು ಕುಟುಂಬಸ್ಥರ ಅಳಲಾಗಿದೆ. ಈ ಪೈಕಿ ಕೆಲವರಿಗೆ ಇನ್ನೂ ತಮ್ಮವರ ಲಗೇಜ್ ಗಳು ಸಿಕ್ಕಿಲ್ಲ ಎಂಬ ಆರೋಪವೂ ಇದೆ.