ನ್ಯೂಕ್ಲಿಯರ್ ಡ್ರೋನ್ ಪರೀಕ್ಷೆ ಯಶಸ್ವಿ

ಭಾನುವಾರ, 26 ಮಾರ್ಚ್ 2023 (08:40 IST)
ಪೋಂಗ್ಯಾಂಗ್ : ನೀರಿನಲ್ಲೂ ದಾಳಿ ಮಾಡಿ ಶತ್ರುಸೈನ್ಯವನ್ನು ನಾಶಮಾಡಬಲ್ಲ ಅಣು ಸಾಮರ್ಥ್ಯದ ಅಂಡರ್ ವಾಟರ್ ಡ್ರೋನ್ `ಹೈಲ್’ ಪ್ರಯೋಗ ಯಶಸ್ವಿಯಾಗಿದೆ ಎಂದು ಉತ್ತರ ಕೋರಿಯಾ ಹೇಳಿಕೊಂಡಿದೆ.
 
ಈ ಮೂಲಕ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಅಮೆರಿಕ-ದಕ್ಷಿಣ ಕೊರಿಯಾದ ಜಂಟಿ ಮಿಲಿಟರಿ ಸಮರಾಭ್ಯಾಸ ನಿಲ್ಲಿಸಬೇಕೆಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ. ಹೈಲ್ ಡ್ರೋನ್ ಮೂಲಕ ಭಾರೀ ಸುನಾಮಿಯನ್ನೇ ಸೃಷ್ಟಿಸಿ ತೀರ ಪ್ರದೇಶದ ನೌಕಾನೆಲೆ, ಸಮುದ್ರದ ಮಧ್ಯೆ ಇರುವ ಶತ್ರುಸ್ಥಾವರಗಳನ್ನ ನಾಶ ಮಾಡುವ ಶಕ್ತಿಯೂ ತಮ್ಮ ದೇಶಕ್ಕೆ ಸಿದ್ಧಿಸಿದೆ ಎಂದು ಉತ್ತರ ಕೋರಿಯಾ ಹೇಳಿಕೊಂಡಿದೆ.

ಉತ್ತರ ಕೊರಿಯಾದ ಪಶ್ಚಿಮ ಭಾಗದಲ್ಲಿ ಜಲಾಂತರ್ಗಾಮಿ ಮೂಲಕ ನ್ಯೂಕ್ಲಿಯರ್ ಡ್ರೋನ್ ಅನ್ನು 80 ರಿಂದ 150 ಮೀಟರ್ ನಷ್ಟು (260 ರಿಂದ 500 ಅಡಿ ಆಳ) ಸಾಗರದ ಆಳಕ್ಕೆ ಕಳುಹಿಸಲಾಗಿತ್ತು. ಸುಮಾರು 59 ಗಂಟೆಗಳ ಕಾಲ ಈ ಪರೀಕ್ಷೆ ನಡೆಯಿತು ಎಂದು ತಿಳಿದುಬಂದಿದೆ. 

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ವಿಶ್ಲೇಷಕರೊಬ್ಬರು, ಉತ್ತರ ಕೊರಿಯಾ ನಡೆಸುತ್ತಿರುವ ವಿವಿಧ ರೀತಿಯ ನ್ಯೂಕ್ಲಿಯರ್ ಪರೀಕ್ಷೆಗಳು ಕೇವಲ ಪ್ರದರ್ಶನವಷ್ಟೇ. ಇದರಿಂದಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಾಕ್ಕೆ ಒತ್ತಡ ಹೆಚ್ಚುತ್ತದೆಯೇ ಹೊರತು, ಈ ಜಲಾಂತರ್ಗಾಮಿ ನ್ಯೂಕ್ಲಿಯರ್ ಡ್ರೋನ್ನನ್ನು ಕಾರ್ಯಾಚರಣೆಗೆ ಉತ್ತರ ಕೊರಿಯಾ ಬಳಸುವುದು ಸಂಶಯಾಸ್ಪದ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ