ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹೊಸ ಭೂಪಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಾಕ್
ಸೋಮವಾರ, 4 ನವೆಂಬರ್ 2019 (07:42 IST)
ಇಸ್ಲಾಮಾಬಾದ್ : ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮುಕಾಶ್ಮೀರ ಮತ್ತು ಲಡಾಖ್ ಒಳಗೊಂಡ ಭಾರತದ ಹೊಸ ಭೂಪಟಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿದ ಹೊಸ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಜಮ್ಮುಕಾಶ್ಮೀರ ಹಾಗೂ ಗಿಲ್ಬಟ್-ಬಾಲ್ಟಿಸ್ತಾನವನ್ನು ಲಡಾಖ್ ನೊಳಗೆ ಸೇರಿಸಲಾಗಿದೆ. ಇದು ಪಾಕಿಸ್ತಾನದ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪಾಕ್ ವಿದೇಶಾಂಗ ಇಲಾಖೆ, ಇದೊಂದು ಕಾನೂನು ಬಾಹಿರ ಕೃತ್ಯ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಸಂಪೂರ್ಣ ಉಲ್ಲಂಘನೆ ಎಂದು ಆರೋಪಿಸಿದೆ.