79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ" ದಲ್ಲಿ ಇಂದು ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ನವಪೀಳಿಗೆ ಸ್ವಾತಂತ್ರ್ಯದ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು. ಮೋದಿಜೀ ಅವರ ಪ್ರೇರೇಪಣೆಯಿಂದ ಇಡೀ ದೇಶದಲ್ಲಿ ನಮ್ಮ ಮುಖಂಡರು, ನಮ್ಮ ಕಾರ್ಯಕರ್ತರ ಮೂಲಕ ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಪ್ರತಿ ಮನೆಯನ್ನು ತಲುಪುವ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು.
ನಮಗೆ ಬಾಬಾಸಾಹೇಬರು ಸರ್ವರಿಗೂ ಸಮಪಾಲು, ಸಮಬಾಳನ್ನು ಕೊಡುವ ಶ್ರೇಷ್ಠ- ಗಟ್ಟಿಯಾದ ಸಂವಿಧಾನ ನೀಡಿದ್ದಾರೆ. ಸಂವಿಧಾನ ಮತ್ತು ತ್ರಿವರ್ಣ ಧ್ವಜ ನಮಗೆ ಅತ್ಯಂತ ಮುಖ್ಯವಾದುದು ಎಂದು ತಿಳಿಸಿದರು. ಆರೆಸ್ಸೆಸ್ ಇಲ್ಲದೇ ಇರುತ್ತಿದ್ದಲ್ಲಿ ನಾವು ಪಾಕಿಸ್ತಾನ ಅಥವಾ ಬಾಂಗ್ಲಾ ದೇಶ ಆಗಿರುತ್ತಿದ್ದೆವೋ ಏನೋ ಎಂದು ಅವರು ನುಡಿದರು.
ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಮಾತನಾಡಿ, ಜಾತಿ, ಧರ್ಮ, ಭಾಷೆ ಮೊದಲು ದೇಶ ನಂತರ ಎಂಬುದು ಸರಿಯಲ್ಲ. ಇದರಿಂದ ದೇಶ ಏಕತೆಯಿಂದ ಉಳಿಯಲು ಸಾಧ್ಯವಾಗದು ಎಂದರು. ರಾಷ್ಟ್ರ ಮೊದಲು ಎಂಬ ಸ್ಪಷ್ಟತೆ ಪ್ರತಿಯೊಬ್ಬ ಭಾರತೀಯರಲ್ಲೂ ಇರುವಂತಾಗಬೇಕು ಎಂದು ತಿಳಿಸಿದರು.
ದೇಶದೆದುರು ಹಲವಾರು ಸವಾಲು- ಸಮಸ್ಯೆಗಳಿವೆ. ಅವನ್ನು ನಿಭಾಯಿಸಲು ಜ್ಞಾನ, ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ ಮತ್ತು ಕೌಶಲ್ಯತೆಗೆ ಆದ್ಯತೆ ಅನಿವಾರ್ಯ ಎಂದು ವಿಶ್ಲೇಷಿಸಿದರು. ಅಂಥ ಮಾನವ ಸಂಪನ್ಮೂಲವುಳ್ಳ ದೇಶಕ್ಕೆ ಉತ್ತಮ ಭವಿಷ್ಯ ಇರುತ್ತದೆ. ಪ್ರಧಾನಿ ಮೋದಿಜೀ ಅವರು ಈ ನಿಟ್ಟಿನಲ್ಲಿ ಸಂದೇಶ ನೀಡಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ವಿವರಿಸಿದರು.