ಪನಾಮಾ ಹಗರಣ: ಪಾಕ್ ಪ್ರಧಾನಿ ನವಾಜ್ ಷರೀಫ್‌ ವಿರುದ್ಧ ತನಿಖೆಗೆ ಆದೇಶ

ಗುರುವಾರ, 20 ಏಪ್ರಿಲ್ 2017 (15:23 IST)
ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ವಿದೇಶಗಳಲ್ಲಿ ಪನಾಮಾಗೇಟ್ ಪ್ರಕರಣದಲ್ಲಿ ಕಾನೂನುಬಾಹಿರವಾಗಿ ಹಣ ಹೂಡಿಕೆ ಮಾಡಿರುವ ಕುರಿತಂತೆ ಜಂಟಿ ತಂಡದಿಂದ  ತನಿಖೆ ನಡೆಸಿ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
 
ನವಾಜ್ ಷರೀಫ್ ವಿರುದ್ಧ ನೇರ ಕ್ರಮಕೈಗೊಳ್ಳಲು ನಿರಾಕರಿಸಿ ತನಿಖೆಗೆ ಆದೇಶಿಸಿರುವುದು ಷರೀಫ್‌ ನಿಟ್ಟುಸಿರು ಬಿಡುವಂತಾಗಿದೆ.ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆಸಿಫ್ ಸಯೀದ್ ಖೋಸಾ ನೇತೃತ್ವದ ಐವರು ನ್ಯಾಯಾಧೀಶರ ನ್ಯಾಯಪೀಠ, ಷರೀಪ್ ವಿರುದ್ಧ ತನಿಖೆಗೆ ಆದೇಶ ನೀಡಿದೆ. 
 
ಸಾಗರೋತ್ತರ ಕಂಪೆನಿಗಳಲ್ಲಿ ಕಾನೂನುಬಾಹಿರವಾಗಿ ಹಣ ಹೂಡಿಕೆ ಮಾಡಿರುವ ಪ್ರಧಾನಿ ಷರೀಫ್ ಮತ್ತು ಕುಟುಂಬಕ್ಕೆ ಹತ್ತಿರವಿರುವ ಸಂಬಂಧಿಗಳನ್ನು ಹುದ್ದೆಗಳಿಂದ ವಜಾಗೊಳಿಸಬೇಕು ಎಂದು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ತೆಹರೀಕ್ ಪಕ್ಷ, ಅವಾಮಿ ಮುಸ್ಲಿಂ ಲೀಗ್ ಮುಖ್ಯಸ್ಥ ಶೇಖ್ ರಷೀದ್ ಅಹ್ಮದ್ ಒತ್ತಾಯಿಸಿದ್ದಾರೆ. 
 
ಏತನ್ಮಧ್ಯೆ, ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಪುತ್ರರು ಪ್ರಕರಣದ ವಿಚಾರಣೆಗಾಗಿ ತನಿಖಾ ತಂಡದ ಮುಂದೆ ವೈಯಕ್ತಿಕವಾಗಿ ಹಾಜರಾಗಬೇಕು. ತನಿಖಾ ತಂಡ ಎರಡು ತಿಂಗಳೊಳಗೆ ವರದಿ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ     
 
ಪನಾಮಾ ಪೇಪರ್ಸ್ ಹಗರಣ ಪಾಕ್ ಸರಕಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು ಉನ್ನತ ರಾಜಕಾರಣಿಗಳು, ಅಧಿಕಾರಿಗಳು ಭಾಗಿಯಾಗಿರುವುದು ಬಹಿರಂಗವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ