ಚೀನಾದಲ್ಲಿ ಜನಸಂಖ್ಯೆ ಏರಿಸಲು ಬೀಜಿಂಗ್ನ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಎಂಬ ಖಾಸಗಿ ಕಂಪನಿಯೊಂದು ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಆಫರ್ ನೀಡಿದೆ.
ತಮ್ಮಲ್ಲಿ ಕೆಲಸ ಮಾಡುವ ಪುರುಷ ಅಥವಾ ಮಹಿಳಾ ಉದ್ಯೋಗಿಗಳು ಮೂರನೇ ಮಗು ಪಡೆದರೆ ಬರೋಬ್ಬರಿ 90,000 ಯುವಾನ್ (11 ಲಕ್ಷ ರೂ.) ಪ್ರೋತ್ಸಾಹ ಧನ ನೀಡಲಾಗುವುದು ಎಂದು ಆಫರ್ ನೀಡಿದೆ.
ಮೂರನೇ ಮಗುವಿಗೆ ಮಾತ್ರವಲ್ಲದೇ ಎರಡನೇ ಮಗುವಿಗೆ ಜನ್ಮ ನೀಡುವ ಉದ್ಯೋಗಿಗೆ 60,000 ಯುವಾನ್ (7 ಲಕ್ಷ ರೂ.) ಮತ್ತು ಮೊದಲ ಮಗುವಿಗೆ ಜನ್ಮ ನೀಡಿದರೆ 30,000 ಯುವಾನ್ (3.50 ಲಕ್ಷ ರೂ.) ನೀಡುವುದಾಗಿ ಘೋಷಿಸಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ.
ಚೀನಾ ಜನಸಂಖ್ಯೆಯನ್ನು ನಿಯಂತ್ರಿಸಲು 1980ರಲ್ಲಿ ಒಂದೇ ಮಗು ಎಂಬ ನೀತಿಯನ್ನು ಜಾರಿಗೆ ತಂದಿದ್ದು, ಆ ಬಳಿಕ ಜನಸಂಖ್ಯೆ ಕಡಿಮೆ ಆಗುತ್ತಿರುವುದನ್ನು ಗಮನಿಸಿ 2021ರಲ್ಲಿ ಚೀನಾ ಮೂರು ಮಕ್ಕಳ ನೀತಿಯನ್ನು ಪರಿಚಯಿಸಿತ್ತು.
ಇದೀಗ ಈ ನೀತಿಯನ್ನು ಉತ್ತೇಜಿಸಲು ಸರ್ಕಾರವೇ ವಿವಿಧ ಯೋಜನೆಗಳನ್ನು ಜಾರಿಗೆ ಮುಂದಾಗಿದೆ. ಜನಸಂಖ್ಯಾ ಬೆಳವಣಿಗೆ ದರ ಕುಸಿಯುತ್ತಿರುವುದರಿಂದ ಚೀನಾಗೆ ಮುಂದಿನ ದಿನಗಳಲ್ಲಿ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿರುವುದರಿಂದ ಚೀನಾ ಜನಸಂಖ್ಯೆ ಏರಿಕೆಗೆ ಸರ್ಕಸ್ ಆರಂಭಿಸಿದೆ.