ಇಸ್ತಾಂಬುಲ್ : ಉಕ್ರೇನ್ನ ಕೀವ್ ಮತ್ತು ಚೆರ್ನಿಹಿವ್ ಮೇಲೆ ಕೇಂದ್ರೀಕರಿಸಿದ್ದ ಸಂಪೂರ್ಣ ಮಿಲಿಟರಿ ಕಾರ್ಯಾಚರಣೆಯನ್ನು ಕಡಿಮೆಗೊಳಿಸುವುದಾಗಿ ರಷ್ಯಾ ತಿಳಿಸಿದೆ.
ಇಸ್ತಾಂಬುಲ್ ರಷ್ಯಾ ಮತ್ತು ಉಕ್ರೇನಿಯನ್ ಸಮಾಲೋಚನಾ ತಂಡಗಳ ನಡುವಿನ ಮಂಗಳವಾರ ʼಅರ್ಥಪೂರ್ಣʼ ಮಾತುಕತೆ ನಡೆಯಿತು. ಈ ವೇಳೆ ರಷ್ಯಾ ಮಹತ್ವದ ನಿರ್ಧಾರವನ್ನು ತಿಳಿಸಿದ್ದು, ಯುದ್ಧ ಅಂತ್ಯವಾಗುವ ಸೂಚನೆ ಸಿಕ್ಕಿದೆ.
ಪರಸ್ಪರ ನಂಬಿಕೆ ಹೆಚ್ಚಿಸಲು, ಹೆಚ್ಚಿನ ಮಾತುಕತೆಗೆ ಪೂರಕ ವಾತಾವರಣ ಸೃಷ್ಟಿಸಲು, ಒಪ್ಪಂದಕ್ಕೆ ಸಹಿ ಮಾಡುವ ಅಂತಿಮ ಗುರಿಯನ್ನು ಸಾಧಿಸಲು ಕೀವ್ ಮತ್ತು ಚೆರ್ನಿಹಿವ್ ಭಾಗಗಳಲ್ಲಿ ಮಿಲಿಟರಿ ಚಟುವಟಿಕೆಯನ್ನು ಆಮೂಲಾಗ್ರವಾಗಿ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ತಿಳಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಫೆ.24 ರಂದು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆಯನ್ನು ಘೋಷಿಸಿದ್ದರು. ಅಂದಿನಿಂದ ರಷ್ಯಾ ಪಡೆಗಳು ಉಕ್ರೇನ್ ಮೇಲೆ ಆಕ್ರಮಣವನ್ನು ಮುಂದುವರಿಸಿದ್ದು, ಯೋಧರು, ನಾಗರಿಕರು ಸೇರಿದಂತೆ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ