ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಆರಂಭಗೊಂಡು 32 ದಿನಗಳು ಕಳೆದಿದೆ. ಎರಡೂ ದೇಶಗಳ ನಡುವೆ ಘನಘೋರ ಕದನ ನಡೆಯುತ್ತಿದೆ. ಆ ಎರಡು ರಾಷ್ಟ್ರಗಳ ನಡುವೆ ಕದನ ನಡೆಯುತ್ತಿದ್ದರೂ ಅದರ ಪರಿಣಾಮಗಳು ಇಡೀ ವಿಶ್ವದ ಮೇಲೆ ತಟ್ಟಿದೆ. ಈ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ಸೋಮವಾರ ಟರ್ಕಿಯಲ್ಲಿ ಎರಡನೇ ಸುತ್ತಿನ ಸಂಧಾನ ಮಾತುಕತೆಗೆ ಎರಡೂ ದೇಶಗಳು ಒಪ್ಪಿಕೊಂಡಿವೆ.
ರಷ್ಯಾ ಅಧ್ಯಕ್ಷ ಪುಟಿನ್ ಹಾಗೂ ಟರ್ಕಿ ಅಧ್ಯಕ್ಷ ಎರ್ಡೋರ್ಗನ್ ನಡುವೆ ಭಾನುವಾರ ನಡೆದು ದೂರವಾಣಿ ಸಂಭಾಷಣೆ ವೇಳೆ ಸಂಧಾನ ಮಾತುಕತೆಗೆ ಒಪ್ಪಿಕೊಳ್ಳಲಾಗಿದೆ. ರಷ್ಯಾ – ಉಕ್ರೇನ್ ಸಂಘರ್ಷದ ಕುರಿತಂತೆ ಉಭಯ ನಾಯಕರು ಚರ್ಚಿಸಿದರು. ಈ ವೇಳೆ ಮುಂದಿನ ಸಭೆಯನ್ನು ಇಸ್ತಾಂಬುಲ್ನಲ್ಲಿ ನಡೆಸಲು ರಷ್ಯಾ ಅಧ್ಯಕ್ಷ ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ಟರ್ಕಿ ಅಧ್ಯಕ್ಷ ಎರ್ಡೋರ್ಗನ್ ಹೇಳಿಕೆ ನೀಡಿದ್ದಾರೆ. ಮಾರ್ಚ್ 28 – 30 ರಂದು ಟರ್ಕಿಯಲ್ಲಿ ಮುಂದಿನ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಉಕ್ರೇನ್ ನ ಸಂಧಾನಕಾರ ಅರಾಖಮಿಯಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ರಷ್ಯಾ ಸಂಧಾನ ತಂಡದ ಮುಖ್ಯಸ್ಥ ವ್ಲಾಡಿಮಿರ್ ಮೆಡಿನ್ಸ್ಕಿ ಸಹ ಈ ವಿಚಾರವನ್ನು ದೃಢಪಡಿಸಿದ್ದಾರೆ.