ಒಂದು ಕೆಜಿ ಅಕ್ಕಿಗೆ 500 ರೂಪಾಯಿ, 500 ಗ್ರಾಂ ಹಾಲಿನ ಪುಡಿ ಬೆಲೆ 790 ರೂಪಾಯಿ, ಒಂದು ಕೆಜಿ ಸಕ್ಕರೆ 290 ರೂಪಾಯಿ, ಒಂದು ಲೀಟರ್ ಪೆಟ್ರೋಲ್ ಬೆಲೆ 300 ರೂಪಾಯಿ.
ಇದು ಶ್ರೀಲಂಕಾದಲ್ಲಿನ ಆರ್ಥಿಕ ಪರಿಸ್ಥಿತಿ. ಕಂಡು ಕೇಳರಿಯದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ಎಲ್ಲಾ ರಾಷ್ಟ್ರಗಳಲ್ಲಿ ನೆರವು ಬೇಡುತ್ತಿದೆ.
ಈಗಾಗಲೇ ಭಾರತ ಅಗತ್ಯ ವಸ್ತುಗಳ ಖರೀದಿಗೆ 1 ಬಿಲಿಯನ್ ಅಮೆರಿಕನ್ ಡಾಲರ್ ಹಣ ಸಾಲ ನೀಡಿದೆ. ಇದೀಗ ಮತ್ತೆ 1 ಬಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡಿ ಎಂದು ಭಾರತಕ್ಕೆ ಮನವಿ ಮಾಡಿದೆ.
ವಿದೇಶಿ ವಿನಿಮಯದಲ್ಲಿ ಶೇಕಡಾ 70 ರಷ್ಟು ಕುಸಿತ ಕಂಡಿರುವ ಶ್ರೀಲಂಕಾದಲ್ಲಿ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಭಾರತ ಈಗಾಗಲೇ ನೆರವು ನೀಡಿದರೂ ಸದ್ಯದ ಪರಿಸ್ಥಿತಿಯಲ್ಲಿ ಶ್ರೀಲಂಕಾಗೆ ಸಾಕಾಗುತ್ತಿಲ್ಲ.
ಹೀಗಾಗಿ ಮತ್ತೆ 1 ಬಿಲಿಯನ್ ಅಮೆರಿಕನ್ ಡಾಲರ್ ನೆರವು ನೀಡುವಂತೆ ಭಾರತವನ್ನು ಕೇಳಿಕೊಂಡಿದೆ. ಭಾರತದ ವಿದೇಶಾಂಗ ಸಚಿವ ಹಾಗೂ ಶ್ರೀಲಂಕಾ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ವಿದೇಶಾಂಗ ಸಚಿವರು ಮಹತ್ವದ ಮಾತುಕತೆ ನಡೆಸಿದ್ದಾರೆ. ಆದರೆ ಈ ಮಾಹಿತಿಗಳನ್ನು ಬಹಿರಂಗಪಡಿಸಲು ಉಭಯ ದೇಶದ ನಾಯಕರು ನಿರಾಕರಿಸಿದ್ದಾರೆ. ಮೂಲಗಳ ಪ್ರಕಾರ ಶ್ರೀಲಂಕಾಗೆ ಮತ್ತೆ ನೆರವು ನೀಡಲು ಭಾರತದ ಮುಂದಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಪ್ರತಿಯೊಂದಕ್ಕೂ ಡಾಲರ್ ಮೂಲಕವೇ ಹಣ ಪಾವತಿ ಮಾಡಬೇಕು. ಆದರೆ ಆದಾಯ ಮೂಲ ಬತ್ತಿಹೋದ ಕಾರಣ, ದೇಶ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದೆ. ವಿದೇಶಿ ವಿನಿಮಯ ಪೂರ್ಣ ಕರಗಿಹೋಗಿದೆ. ವಿದೇಶಗಳಿಂದ ಅಗತ್ಯ ವಸ್ತುಗಳ ಖರೀದಿಗೂ ಹಣ ಇಲ್ಲದಾಗಿದೆ. ಹೀಗೆ ಅಗತ್ಯ ವಸ್ತು ಪೂರೈಕೆ ಕಡಿತಗೊಂಡ ಕಾರಣ ಅವುಗಳ ಬೆಲೆ ಗಗನಕ್ಕೇರಿದೆ.